ಸರಳ ವಿವಾಹಗಳ ಜೊತೆ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಗಳಾಗಬೇಕು: ಸಿದ್ದರಾಮಯ್ಯ

Update: 2021-02-09 16:39 GMT

ಮೈಸೂರು,ಫೆ.9: ಸರಳ ವಿವಾಹಗಳ ಜೊತೆಗೆ ಅಂತರ್ಜಾತಿ ವಿವಾಹ ಹಾಗೂ ಅಂತರ್ ಧರ್ಮೀಯ ವಿವಾಹಗಳಾದರೆ ಒಳ್ಳೆಯದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಸುತ್ತೂರಿನಲ್ಲಿ ಜಗದ್ಗುರು ಶ್ರೀವಿರಸಿಂಹಾಸನ ಸಂಸ್ಥಾನ ಮಠದ ವತಿಯಿಂದ ಮಂಗಳವಾರ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಸರಳ ವಿವಾಹಗಳು ನಡೆದರೆ ಉತ್ತಮ ಸರಳ ವಿವಾಹಗಳ ಜೊತೆಗೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳಾದರೆ ಒಳ್ಳೆಯದು. ಆದರೆ ಸರ್ಕಾರ ಅಂತರ್ ಧರ್ಮೀಯ ವಿವಾಹಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ನಾವು ಮನುಷ್ಯರು ಹಾಗಾಗಿ ನಾವು ಎಲ್ಲರನ್ನೂ ಮನುಷ್ಯರನ್ನಾಗಿಯೇ ನೋಡಬೇಕು ಎಂದು ಹೇಳಿದರು.

ಅಸ್ಪೃಶ್ಯತೆ ಆಚರಣೆಯನ್ನು ಹೋಗಲಾಡಿಸಲು ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ ಪ್ರಯತ್ನಿಸಿದ್ದರೂ. ಆದರೆ ಇಂದೂ ಜಾತಿಯತೆ, ಅಸ್ಪೃಶ್ಯತೆ ಆಚರಣೆ ನಮ್ಮಲ್ಲಿ ಹೋಗದಿರುವುದು ವಿಷಾಧನೀಯ ಎಂದು ಹೇಳಿದರು.

ನಾವು ಹುಟ್ಟುವಾಗ ವಿಶ್ವಮಾನವರಾಗಿರುತ್ತೇವೆ. ಆದರೆ ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ನಾವು ಅಲ್ಪಮಾನವರಾಗದೇ ವಿಶ್ವಮಾನವರಾಗಿ ಬದುಕು ನಡೆಸಬೇಕು, ಆ ನಿಟ್ಟಿನಲ್ಲಿ ನಾವೆಲ್ಲೂ ಒಂದೂ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಜಾತಿ ವ್ಯವಸ್ಥೆ ಹೋಗಿ ಸಮಸಮಾಜ ನಿರ್ಮಾಣಕ್ಕೆ ಹಾಗೂ ಜಾತ್ಯಾತೀತ ಸಮಾಜಕ್ಕೆ ಈ ಅಂತರ್ಜಾತಿ ವಿವಾಹ ಅಗತ್ಯ. ಮೇಲು ಜಾತಿ ಮತ್ತು ಅಸ್ಪೃಶ್ಯ ಜಾತಿಗೆ ಬಸವಣ್ಣನವರು ಮದುವೆ ಮಾಡಿಸಿದ್ದರು. 850 ವರ್ಷಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ಮತ್ತು ಪ್ರಗತಿಪರ  ಚಿಂತನೆ ಮಾಡಿದ್ದವರು ಬಸವಣ್ಣ. ಇಂದಿನ ಪಾರ್ಲಿಮೆಂಟ್, ಅಸೆಂಬ್ಲಿಗಳನ್ನ ಅನುಭವ ಮಂಟಪ ನಡೆಸುವ ಮೂಲಕ ಆವಾಗಲೇ ಮಾಡಿದ್ದರು. ಹಾಗಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಮುಂದಾಗಿದ್ದೆ. ಆದರೆ ಆರಂಭವಾಗುವಷ್ಠರಲ್ಲಿ ಅಧಿಕಾರ ಕಳೆದುಕೊಂಡೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಎಂ.ಎ. ನೀಲಾಂಭಿಕಾ ಅವರ ವಚನಕ್ಕೊಂದು ಕಥೆ ಕೃತಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಲೋಕಾರ್ಪಣೆಗೊಳಿಸಿದರು. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ, ವಾಟಾಳು ಮಠದ ಸ್ವಾಮೀಜಿ ಉಪಸ್ಥಿತರಿದ್ದರು. ಸಮಾಜ ಸೇವಕಿ ಎಸ್.ಆರ್.ಗಾಯಿತ್ರಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್‍ನಾಥ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ವಿಧಾಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖ್ಯ ಅತಿಥಿಗಳಾಗಿ ಭಾಗವಹಸಿದ್ದರು. ಶಿವಮೂರ್ತಿ ವಂದಿಸಿದರೆ ಮಲ್ಲಿಕಾರ್ಜುನ ಸ್ವಾಮಿ ನಿರೂಪಿಸಿದರು.

ಗುರುಶಿಷ್ಯರ ಸಮಾಗಮ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗುರು ಶಿಷ್ಯರ ಸಮಾಗಮ ನಡೆಯಿತು.

ಕಾಂಗ್ರೆಸ್ ತೊರೆದ ನಂತರ ಇದೇ ಮೊದಲ ಬಾರಿ ಎಸ್.ಟಿ.ಸೋಮಶೇಖರ್ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕ ಕುಳಿತುಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪರಸ್ಪರ ಇಬ್ಬರೂ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಆದರೆ ಸುತ್ತೂರು ಮಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News