ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ ಆರೋಪ: ಮೆಸ್ಕಾಂ ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ತರಾಟೆ

Update: 2021-02-10 11:22 GMT

ಶಿವಮೊಗ್ಗ, ಫೆ.10: ನಿರಂತರ ಜ್ಯೋತಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಏನು ಕಣ್ಮುಚ್ಚಿ ಕುಳಿತಿದ್ದೀರಾ ಎಂದು ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿನ ಲೋಪದೋಷಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸಾಕ್ಷಿ ಸಮೇತ ಆರೋಪಿಸಿದ ಸಚಿವ ಈಶ್ವರಪ್ಪ, ನಿರಂತರ ಜ್ಯೋತಿ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ ಮಾಡಬೇಕಾದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ಇಂತಹ ಕಳಪೆ ವಸ್ತುಗಳನ್ನು ಬಳಸುವಾಗ ನೀವೆಲ್ಲಾ ಏನು ಮಾಡುತ್ತಿದ್ದೀರಿ? ಇದನ್ನೆಲ್ಲಾ ನೋಡಬೇಕಾದವರು ನೀವೇ ತಾನೆ? ಟೆಂಡರ್ ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಏಕೆ ಬಳಸಿಲ್ಲ? ಕಂಟ್ರಾಕ್ಟರ್ ಗೆ ಯಾರು ಕೇಳಬೇಕು? ಸಾಮಾಗ್ರಿಗಳನ್ನೇ ಹಾಕದೇ, ಬಿಲ್ ಪಾವತಿಸಿಕೊಂಡಿದ್ದಾರೆ. ಇವೆಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಫೀಡರ್ ಅಳವಡಿಕೆಯಲ್ಲಿ 67 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 44 ಫೀಡರ್‌ಗಳ ಕಾಮಗಾರಿ ಮುಗಿದಿದೆ. ಆದರೆ ಕಾಮಗಾರಿಯ ಪೇಮೆಂಟ್ ಅಷ್ಟು ಸಹ ಗುತ್ತಿಗೆದಾರನಿಗೆ ಬಿಡುಗಡೆ ಆಗಿದೆ. ಮೆಂಟೈನೆನ್ಸ್‌ಗೆ ಎತ್ತಿಟ್ಟಿರುವ ಹಣ ಬಿಟ್ಟರೆ ಅಷ್ಟು ಹಣ ಗುತ್ತಿಗೆದಾರನಿಗೆ ಬಿಡುಗಡೆ ಮಾಡಿರುವ ಕುರಿತು ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.

ಫೀಡರ್ ಗಳಲ್ಲಿ ಅಳವಡಿಸಿರುವ ಕಂಬಗಳ ಬಗ್ಗೆಯೂ ಸರಿಯಾಗಿ ಲೆಕ್ಕ ಇಲ್ಲ. ಪ್ರತಿ ಕಂಬಗಳಿಗೆ ಸಂಖ್ಯೆಯನ್ನೂ ನಮೂದಿಸಿರುವುದಿಲ್ಲ. ಕಾಮಗಾರಿ ಆರಂಭಕ್ಕಿಂತ ಮೊದಲು ಗುತ್ತಿಗೆದಾರನೊಂದಿಗೆ ಬಾಂಡ್ ಬರೆದಿಲ್ಲ. 2019ರಿಂದ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಟಾನ ಆರಂಭಿಸಲಾಗಿದ್ದು, ಮೂಲ ಕ್ರಿಯಾ ಯೋಜನೆಯನ್ನು ಉಲ್ಲಂಘಿಸಿ ಕಾಮಗಾರಿ ಅನುಷ್ಟಾನಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮೆಸ್ಕಾಂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ: ನಿರಂತರ ಜ್ಯೋತಿ ಕಾಮಗಾರಿ ಅನುಷ್ಟಾನದಲ್ಲಿ ಲೋಪದೋಷಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ತನಿಖೆ ನಡೆಸಿ 15ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಸ್ಥಳೀಯವಾಗಿ ರಚಿಸಲಾಗುವುದು. ಈ ಸಮಿತಿಗೆ ಎಲ್ಲಾ ಮಾಹಿತಿಯನ್ನು ತಕ್ಷಣ ಒದಗಿಸಬೇಕು. ಸಮಿತಿ ಪರಿಶೀಲನೆ ನಡೆಸಿ 15ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಬೇಕು. ಅಗತ್ಯ ಬಿದ್ದರೆ ಹೆಚ್ಚಿನ ತನಿಖೆ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು.ಯೋಜನೆ ಅನುಷ್ಟಾನದಲ್ಲಿನ ಲೋಪದೋಷಗಳನ್ನು ಗುತ್ತಿಗೆದಾರನಿಂದ ಸರಿಪಡಿಸಿಕೊಳ್ಳಬೇಕು. ಗುತ್ತಿಗೆದಾರನಿಗೆ ಪಾವತಿಯಾಗಿರುವ ಹಣವನ್ನು ವಸೂಲು ಮಾಡಿ, ಲೋಪದೋಷಗಳನ್ನು ಕಾನೂನು ಪ್ರಕಾರ ಸರಿಪಡಿಸಬೇಕು. ಮೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳಲ್ಲಿ ನಡೆದಿರುವ ಯೋಜನೆ ಅನುಷ್ಟಾನದ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News