ವಿವಿಧ ಸಮುದಾಯಗಳ ಮೀಸಲಾತಿ ಬಗ್ಗೆ ಸಂವಿಧಾನದ ಚೌಕಟ್ಟಿನಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಯಡಿಯೂರಪ್ಪ

Update: 2021-02-10 12:35 GMT

ಬೆಂಗಳೂರು, ಫೆ. 10: ‘ಎಸ್ಟಿ ವರ್ಗಕ್ಕೆ ಮೀಸಲಾತಿ ಹೆಚ್ಚಳ, ಕುರುಬ ಸಮುದಾಯವನ್ನು ಎಸ್ಟಿಗೆ, ಲಿಂಗಾಯತ ಪಂಚಮಸಾಲಿ ಜನಾಂಗವನ್ನು 2-ಎ'ಗೆ ಸೇರ್ಪಡೆ ಹೋರಾಟಕ್ಕೆ ಸಂಬಂಧಿಸಿದಂತೆ ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಡಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯರ 113ನೆ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿ ಮುಂಭಾಗದಲ್ಲಿರುವ ಹನುಮಂತಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಜಾತಿ ಸಮುದಾಯಗಳಿಗೆ ಸಂವಿಧಾನದ ಪ್ರಕಾರವೇ ಮೀಸಲಾತಿ ಕಲ್ಪಿಸಬೇಕಾಗುತ್ತದೆ ಎಂದರು.

ಹೀಗಾಗಿ ಕಾನೂನಿನ ಚೌಕಟ್ಟಿನಲ್ಲಿ ಯಾವ ಜಾತಿ ಸಮುದಾಯಗಳಿಗೆ ಯಾವ ರೀತಿ ಮೀಸಲಾತಿ ನೀಡಲು ಸಾಧ್ಯ ಎಂಬುದನ್ನು ಕಾನೂನು ಹಾಗೂ ಸಂವಿಧಾನ ತಜ್ಞರ ಜತೆ ಚರ್ಚಿಸಿ ಒಂದು ಸೂಕ್ತ ತೀರ್ಮಾನ ಕೈಗೊಳ್ಳುವುದು ಎಂದ ಅವರು, ದೇಶದ ವಿವಿಧ ರಾಜ್ಯಗಳು ಯಾವ ರೀತಿ ಜಾತಿ ಸಮುದಾಯಗಳಿಗೆ ಮೀಸಲಾತಿ ನೀಡಿದ್ದಾರೆಯೋ ಅದೇ ರೀತಿ ಕರ್ನಾಟಕದಲ್ಲೂ ಮೀಸಲಾತಿ ಸೌಲಭ್ಯ ಒದಗಿಸಲು ಸಾಧ್ಯ. ಎಲ್ಲವನ್ನೂ ಸಂವಿಧಾನದ ಚೌಕಟ್ಟಿನಲ್ಲೇ ನಿರ್ಧರಿಸಬೇಕಾಗುತ್ತದೆ ಎಂದರು.

ಮಾರ್ಚ್‍ನಲ್ಲಿ ಬಜೆಟ್: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ತೀರ್ಮಾನಿಸಿದ್ದೇನೆ. ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದೇನೆ. ಇಂದೂ ವಿವಿಧ ಇಲಾಖೆಗಳ ಜತೆ ಬಜೆಟ್ ಸಭೆ ನಡೆಸಲಾಗಿದೆ ಎಂದ ಅವರು, ಆಯವ್ಯಯ ಮಂಡನೆಗೆ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News