ಎಲ್ಲರಿಗೂ ಸುಲಭವಾಗಿ ಮರಳು ಸಿಗುವಂತೆ ಮಾಡಲು ನಿಯಮಗಳ ಸರಳೀಕರಣ: ಸಚಿವ ಮುರುಗೇಶ್ ನಿರಾಣಿ

Update: 2021-02-10 13:13 GMT

ಬೆಂಗಳೂರು, ಫೆ. 10: ‘ಎಲ್ಲರಿಗೂ ಮರಳು ಸುಲಭವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಮರಳು ಗಣಿಗಾರಿಕೆ ಸಂಬಂಧ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರ ನೂತನ ಗಣಿ ನೀತಿ ತರಲು ಚಿಂತನೆ ನಡೆಸಲಾಗಿದೆ. ಹಳ್ಳ-ಕೊಳ್ಳಗಳಲ್ಲಿ ಸಿಗುವ ಮರಳು ಬಳಕೆಗೆ ಅವಕಾಶ ಕಲ್ಪಿಸುವುದು, ಎತ್ತಿನಗಾಡಿ, ಟ್ರ್ಯಾಕ್ಟರ್ ಗಳಲ್ಲಿ ತರಲು ಅವಕಾಶ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯವಾಗಿ ಎತ್ತಿನಗಾಡಿಗಳಲ್ಲಿ ಮರಳನ್ನು ಸಾಗಾಣೆ ಮಾಡುವವರಿಗೆ ಯಾವುದೇ ಕಾರಣಕ್ಕೂ ಕಿರುಕುಳ ಆಗಬಾರದು. ಅಲ್ಲದೆ, ಅವರ ಮೇಲೆ ಅನಗತ್ಯ ಕೇಸುಗಳನ್ನು ಹಾಕುವುದನ್ನು ತಪ್ಪಿಸಲಾಗುವುದು ಎಂದ ಅವರು, ಈ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಸುಲಭವಾಗಿ ಲಭ್ಯವಾಗುವ ಮರಳು ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದರು.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಾಗಾಣಿಕೆ ಮಾಡಲು ಅವಕಾಶವಿಲ್ಲ. ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು, ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಗಳು ಅಸ್ತಿತ್ವದಲ್ಲಿದೆ ಎಂದ ಅವರು, ಗಣಿಗಾರಿಕೆಗೆ ಅನುಮತಿ ನೀಡಲು ಮೊದಲ ಬಾರಿಗೆ ಇಲಾಖೆಯಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗಿದೆ ಎಂದರು.

ತ್ವರಿತ ವಿಲೇ: ತ್ವರಿತವಾಗಿ ಅರ್ಜಿಗಳನ್ನು ವಿಲೇವಾರಿಗೊಳಿಸಿ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರು. ರಾಜ್ಯ ಮಟ್ಟದ ಉನ್ನತ ಸಮಿತಿಗೆ ಸಚಿವರೇ ಮುಖ್ಯಸ್ಥರು ಎಂದ ಅವರು, 5 ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತದ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳೇ ಇತ್ಯರ್ಥ ಪಡಿಸಬೇಕು. 5 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳಿಗೆ ಸಚಿವರ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಪರವಾನಿಗೆ ಪಡೆಯಲು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಅನುಕೂಲ ಕಲ್ಪಿಸಲಿದೆ. ಅರಣ್ಯ, ಪರಿಸರ, ಕಂದಾಯ ಮತ್ತು ಗೃಹ ಇಲಾಖೆಯ ನಡುವೆ ಸಮನ್ವಯ ಸಾಧಿಸಿ ಏಕಗವಾಕ್ಷಿ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದರು.

ರಾಜಸ್ವ ದ್ವಿಗುಣ: 2020-21ನೆ ಸಾಲಿನಲ್ಲಿ 3,750 ಕೋಟಿ ರೂ.ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ರಾಜಸ್ವ ಸಂಗ್ರಹ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗ ಸೃಷ್ಟಿ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಗರ್ಭ ಶಾಸ್ತ್ರಜ್ಞರು ಇನ್ನು ಮುಂದೆ ಕಡ್ಡಾಯವಾಗಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಾರ್ಖಂಡ್ ಮಾದರಿಯಲ್ಲೇ ರಾಜ್ಯದಲ್ಲಿಯೂ ಗಣಿ ವಿಶ್ವವಿದ್ಯಾಲಯ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದ ಅವರು, ರಾಜ್ಯದ ನಾಲ್ಕು ಕಂದಾಯ ವಿಭಾಗ ಹಾಗೂ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಗಣಿ ಅದಾಲತ್ ಆರಂಭಿಸಿದ್ದು, ತ್ವರಿತವಾಗಿ ಗಣಿ ಸಂಬಂಧಿತ ಅರ್ಜಿಗಳ ವಿಲೇವಾರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ರಾಜ್ಯದಲ್ಲಿ ಎಲ್ಲರಿಗೂ ಸುಲಭವಾಗಿ ಮರಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಮತ್ತು ಕರಾವಳಿ ಸೇರಿದಂತೆ ಪ್ರತ್ಯೇಕ ಮರಳು ನೀತಿ ರೂಪಿಸಲು ಉದ್ದೇಶಿಸಿದ್ದು, ಈಗಾಗಲೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಶೀಘ್ರದಲ್ಲೆ ಮರಳು ನೀತಿ ಜಾರಿಗೆ ತರಲಾಗುವುದು ಎಂದರು.

‘ಶಿವಮೊಗ್ಗ ಕಲ್ಲು ಕ್ವಾರಿ ಸ್ಫೋಟ ಪ್ರಕರಣ ಸಂಬಂಧ ಈಗಾಗಲೇ ಜಿಲೆಟಿನ್ ಕಡ್ಡಿ ಪೂರೈಕೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ. ಸ್ಥಗಿತಗೊಂಡಿರುವ ಗಣಿ, ಕಲ್ಲು ಕ್ವಾರಿ, ಕ್ರಷರ್ ಗಳ ನಷ್ಟ ತಪ್ಪಿಸಲು ಅವುಗಳ ಸಮಸ್ಯೆಗಳನ್ನು ಪರಿಹರಿಸಿ ಕಾನೂನು ಅಡಿಯಲ್ಲಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು'

-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News