ದೇಶಾದ್ಯಂತ ಧರ್ಮಸ್ಥಳ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ: ವಿರೇಂದ್ರ ಹೆಗ್ಗಡೆ

Update: 2021-02-10 16:48 GMT

ಬೆಂಗಳೂರು, ಫೆ.10: ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವ ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆಯಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಗ್ರಾಮೀಣ ಮಹಿಳೆಯರು ತಯಾರಿಸಿದ ಸಿರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಧರ್ಮಸ್ಥಳದ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯ ಚಟುವಟಿಕೆಗಳು ವಿಸ್ತರಣೆಯಾಗುತ್ತಿವೆ. ದೇಶಾದ್ಯಂತ ತರಬೇತಿ ಕೇಂದ್ರ ತೆರೆಯಲು ಅವಕಾಶ ದೊರೆತಿದೆ ಎಂದರು.

ಮಹಾತ್ಮಾ ಗಾಂಧೀಜಿ ಪ್ರೇರಣೆಯಿಂದ ಗೃಹ ಮತ್ತು ಗುಡಿ ಕೈಗಾರಿಕೆಗಳನ್ನು ಉಳಿಸಲು ಸಾಧ್ಯವಾಗಿದೆ. ಇಲ್ಲವಾಗಿದ್ದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಗುಡಿ ಕೈಗಾರಿಕೆಗಳು ನಶಿಸುತ್ತಿದ್ದವು. ಅವರ ಆಶಯದಿಂದ ಗುಡಿ ಕೈಗಾರಿಕೆಗಳು ಬೆಳವಣಿಗೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣ ಮಳೆಯರು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು ಬಹುದೊಡ್ಡ ಸವಾಲಾಗಿದೆ. ಗ್ರಾಮೀಣ ಜನರನ್ನು ವಂಚಿಸುವ ಪ್ರವೃತ್ತಿ ಸಹ ಇತ್ತೀಚೆಗೆ ಹೆಚ್ಚಾಗುತ್ತಿದೆ. ವಂಚನೆಗೆ ಅವಕಾಶ ದೊರೆಯಬಾರದು. ಗ್ರಾಮೀಣ ಆರ್ಥಿಕತೆ ಸುಧಾರಣೆಯಲ್ಲಿ ಗುಡಿ ಕೈಗಾರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಉತ್ಪನ್ನಗಳಿಗೆ ಸಿರಿ ಸಂಸ್ಥೆ ಬ್ರ್ಯಾಂಡ್ ಆಗಿ ಕೆಲಸ ಮಾಡುತ್ತಿದೆ. ಅಗರಬತ್ತಿ, ಬಟ್ಟೆ, ಉಪ್ಪಿನಕಾಯಿ ಮತ್ತಿತರ ಹಲವಾರು ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಇದರಿಂದ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ದೊರಕಿಸಿಕೊಡಲು ಸಾಧ್ಯವಾಗಿದೆ. ಗ್ರಾಮೀಣರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲು ಸಹಕಾರಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಯಾವುದೇ ಒಂದು ವಸ್ತುವಿಗೆ ಬ್ರ್ಯಾಂಡ್ ಅತ್ಯಂತ ಪ್ರಮುಖವಾಗಿದೆ. ಉತ್ತಮ ಬ್ರ್ಯಾಂಡಿಂಗ್‍ನಿಂದ ವಸ್ತುಗಳ ಮಾರಾಟ ಸುಲಲಿತವಾಗುತ್ತದೆ. ಉತ್ಪಾದನೆ ಮಾಡಿದವರ ಶ್ರಮ ಮತ್ತು ಅದರ ಹಿಂದಿನ ಉದ್ದೇಶ ಅತ್ಯಂತ ಮುಖ್ಯವಾಗಿದೆ ಎಂದರು.

ಚಿತ್ರನಟಿ ತಾರಾ ಅನುರಾಧ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಜನರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಮಹಿಳಾ ಸಂಸ್ಥೆಗಳು ಸಿರಿ ಸಂಸ್ಥೆ ಜತೆಗೂಡಿ ಕೆಲಸ ಮಾಡುತ್ತಿದ್ದು, ಇವರ ಬದುಕಿಗೆ ಆಸರೆಯಾಗಿದೆ ಎಂದು ಹೇಳಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ ಮಾತನಾಡಿ, ಮಲ್ಲೇಶ್ವರದ ಸಿರಿ ಮಳಿಗೆ ಮತ್ತು ಬೆಂಗಳೂರಿನ 20ಕ್ಕೂ ಹೆಚ್ಚು ಸೂಪರ್ ಮಾರುಕಟ್ಟೆಗಳಲ್ಲಿ ಇಂದು ಬಿಡುಗಡೆಯಾದ ವಸ್ತುಗಳು ದೊರೆಯುತ್ತವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News