ಆಯವ್ಯಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ 'ಗೌರವಧನ ಹೆಚ್ಚಳ': ಸಚಿವೆ ಶಶಿಕಲಾ ಜೊಲ್ಲೆ

Update: 2021-02-10 13:22 GMT

ಬೆಂಗಳೂರು, ಫೆ. 10: ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ವಾರಿಯರ್ಸ್ ಆಗಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರ ಗೌರವಧನ ಹೆಚ್ಚಳ ಸಂಬಂಧ ಸಿಎಂ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಅನುದಾನಕ್ಕೆ ಮನವಿ: ಮುಂದಿನ ಬಜೆಟ್‍ನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೆಚ್ಚುವರಿಯಾಗಿ 534 ಕೋಟಿ ರೂ.ಅನುದಾನ ಕೋರಲಾಗಿದೆ. ಅಪೌಷ್ಟಿಕತೆ ನಿವಾರಣೆ, ಗರ್ಭಿಣಿ ತಾಯಂದಿರು ಮತ್ತು ಹಸುಗೂಸುಗಳ ಮರಣ ತಪ್ಪಿಸಲು ಪೌಷ್ಟಿಕಾಂಶಗಳ ಆಹಾರ ಒದಗಿಸಲು ಆಯವ್ಯಯದಲ್ಲಿ ಹೊಸ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು ಎಂದರು.

ಪ್ರಶಸ್ತಿ ಪ್ರದಾನ: ಹಿರಿಯ ನಾಗರಿಕರು, ವಿಶೇಷಚೇತನರಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ನಾಳೆ (ಫೆ.11) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.

ಹಿರಿಯ ನಾಗರಿಕರು, ವಿಶೇಷಚೇತನರು, ಶಿಕ್ಷಕರು, ಸಂಘ-ಸಂಸ್ಥೆಗಳು ಸಮಾಜಕ್ಕೆ ಸೇವೆ ಮಾಡುತ್ತಿದ್ದು, 30 ಮಂದಿ ಶಿಕ್ಷಕರು, 8 ಸ್ವಯಂ ಸೇವಾ ಸಂಸ್ಥೆಗಳು, 15 ವ್ಯಕ್ತಿಗಳು, 5 ಮಂದಿ ವಿಶೇಷ ಶಿಕ್ಷಕರು ಸೇರಿದಂತೆ ಹಲವು ಗಣ್ಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯಕ್ತಿಗಳು, ಸಂಘ-ಸಂಸ್ಥೆಗಳನ್ನು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಏಳು ಮಂದಿಗೆ ತಲಾ 1 ಲಕ್ಷ ರೂ.ನಂತೆ ನಗದು ಪ್ರಶಸ್ತಿ ಸೇರಿದಂತೆ ಒಟ್ಟು 12.75 ಲಕ್ಷ ರೂ.ಮೊತ್ತದ ವಿವಿಧ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News