ಉತ್ತರಾಖಂಡ ದುರಂತದಲ್ಲಿ ಮನುಷ್ಯನ ಪಾಲೆಷ್ಟು?

Update: 2021-02-12 04:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಿಮಾಲಯ ಪರ್ವತಶ್ರೇಣಿಯ ರಾಜ್ಯವಾದ ಉತ್ತರಾಖಂಡ ಮತ್ತೊಮ್ಮೆ ಭೀಕರ ಪ್ರಾಕೃತಿಕ ದುರಂತಕ್ಕೆ ಸಾಕ್ಷಿಯಾಯಿತು. ಹಿಮಾಲಯ ಶಿಖರದ ನೀರ್ಗಲ್ಲು ಸ್ಫೋಟ ಗೊಂಡಿದ್ದರಿಂದ ಹಿಮಪ್ರವಾಹ ಸೃಷ್ಟಿಯಾಗಿ ಹೃಷಿಗಂಗಾ ನದಿ ಉಕ್ಕಿಹರಿದಿದ್ದರಿಂದ ಭೀಕರ ಅನಾಹುತವೇ ಸಂಭವಿಸಿತು. ಹೃಷಿಗಂಗಾ ನದಿಯ ತಪ್ಪಲಲ್ಲಿ ಎರಡು ಜಲ ವಿದ್ಯುತ್ ಯೋಜನೆಗಳಿಗಾಗಿ ನಿರ್ಮಾಣವಾಗುತ್ತಿರುವ ಸುರಂಗದ ಒಳಗಡೆ ದುಡಿಯುತ್ತಿದ್ದ 125ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರಬೇಕೆಂದು ಶಂಕಿಸಲಾಗಿದೆ. ಅವರಲ್ಲಿ 25 ಮಂದಿಯನ್ನು ರಕ್ಷಿಸಲಾಗಿದ್ದು, 19 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಹಿಮಪ್ರವಾಹದಿಂದಾಗಿ ಜಲವಿದ್ಯುತ್ ಯೋಜನೆಗಳ ಇಡೀ ಪ್ರದೇಶವು ಮಣ್ಣಿನರಾಶಿಯಡಿ ಮುಳುಗಿ ಹೋಗಿದೆೆ. ಆಸುಪಾಸಿನಲ್ಲಿರುವ ಹಲವಾರು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ನಿರ್ಗಲ್ಲು ಸ್ಫೋಟದ ಬಳಿಕ ಹಿಮಪ್ರವಾಹ ಮಿಂಚಿನವೇಗದಲ್ಲಿ ಹರಿದುಬಂದಿದ್ದರಿಂದ ಹೃಷಿಗಂಗಾ ಜಲವಿದ್ಯುತ್ ಯೋಜನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಪರಾರಿಯಾಗಲು ಅವಕಾಶವೇ ದೊರೆಯದೆ ಅವರು ಪ್ರವಾಹದಲ್ಲೇ ಕೊಚ್ಚಿಹೋಗಿದ್ದಾರೆ. ಒಟ್ಟಿನಲ್ಲಿ ಕೆಲವೇ ನಿಮಿಷಗಳ ಅವಧಿಯಲ್ಲೇ ಮಹಾವಿನಾಶವೊಂದು ಸಂಭವಿಸಿಯಾಗಿತ್ತು.

 ನಂದಾದೇವಿ ಜೈವಿಕವಲಯ ಪ್ರದೇಶದಲ್ಲಿರುವ ಈ ನೀರ್ಗಲ್ಲಿನ ಸ್ಫೋಟವು ಹವಾಮಾನ ಬದಲಾವಣೆಯ ಪರಿಣಾಮವೆಂದೇ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಜನವರಿ ತಿಂಗಳಲ್ಲಿ ಈ ಶಿಖರ ಪ್ರದೇಶವು ಆರು ದಶಕಗಳಲ್ಲೇ ಅತ್ಯಧಿಕ ತಾಪಮಾನವನ್ನು ಕಂಡಿತ್ತು. ಇದರಿಂದಾಗಿ ಒತ್ತಡ ಹೆಚ್ಚಾಗಿ ನೀರ್ಗಲ್ಲು ಸ್ಫೋಟಗೊಂಡಿರಬೇಕೆಂದು ವಿಜ್ಞಾನಿಗಳು ಊಹಿಸಿದ್ದಾರೆ. ನೀರ್ಗಲ್ಲು ಸ್ಫೋಟ ಮೊದಲ ಸಲ ಗಮನಕ್ಕೆ ಬಂದಿದ್ದು, ಸಮುದ್ರ ಮಟ್ಟದಿಂದ 3,700 ಕಿ.ಮೀ. ಎತ್ತರದಲ್ಲಿರುವ ರೈನಿ ಗ್ರಾಮದ ನಿವಾಸಿಗಳಿಗೆ. ಗಂಗಾ ನದಿಯ ಉಪನದಿಗಳನ್ನು ಸೇರಿಕೊಂಡ ಪ್ರವಾಹದ ನೀರು 100 ಕಿ.ಮೀ.ಗಳಷ್ಟು ಇಳಿಜಾರು ಪ್ರದೇಶಗಳಲ್ಲಿ ಭೋರ್ಗರೆಯುತ್ತಾ ಹರಿದುಬಂದಿತು ಹಾಗೂ ದಂಡೆ ಪ್ರದೇಶಗಳಲ್ಲಿನ ಗ್ರಾಮಗಳ ನಿವಾಸಿಗಳನ್ನು ತುರ್ತು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.ಒಂದಿಷ್ಟು ತಡವಾಗುತ್ತಿದ್ದರೂ ಭಾರೀ ಪ್ರಮಾಣದ ಪ್ರಾಣ ಹಾನಿಯಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು.

ರೈನಿ ಗ್ರಾಮವು 1970ರ ದಶಕದಲ್ಲಿ ಜನಪ್ರಿಯವಾಗಿದ್ದ ಚಿಪ್ಕೊ ಆಂದೋಲನದ ತೊಟ್ಟಿಲೆಂದೇ ಖ್ಯಾತವಾಗಿತ್ತು. ಹಿಮಾಲಯದ ಬೆಟ್ಟಗಳಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ರೂಪುಗೊಂಡಿದ್ದ ಈ ಜನಾಂದೋಲನದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮೀಣ ಪರಿಸರವಾದಿಗಳು ಮರಗಳ ಸುತ್ತಲೂ ಮಾನವ ಸರಪಳಿಗಳನ್ನು ನಿರ್ಮಿಸಿ, ಮರಗಳ ಕಡಿಯುವಿಕೆಯ ವಿರುದ್ಧ ದೇಶದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದರು. ನಂದಾದೇವಿ ಶಿಖರ ಪ್ರದೇಶದಲ್ಲಿ 25ಕ್ಕೂ ಅಧಿಕ ನೀರ್ಗಲ್ಲುಗಳಿದ್ದು, ಅವು 690 ಚದರ ಕಿ.ಮೀ. ಪ್ರದೇಶದುದ್ದಕ್ಕೂ ಹರಡಿಕೊಂಡಿವೆ.

2021ರ ಜನವರಿ ಉತ್ತರಾಖಂಡ ರಾಜ್ಯದಲ್ಲಿ ಕಳೆದ ಆರು ದಶಕಗಳಲ್ಲಿಯೇ ಗರಿಷ್ಠ ತಾಪಮಾನವನ್ನು ಕಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಹಿಮಪಾತಗಳು ಸಂಭವಿಸುತ್ತಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಚಳಿಗಾಲದ ಬಳಿಕ ಅಲ್ಲಿ ಹಿಮ ಕರಗತೊಡಗುತ್ತದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಹಿಮಕರಗುವಿಕೆಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ತಾಪಮಾನ ಹೆಚ್ಚಳದಿಂದಾಗಿ ಹಿಂದೂ ಕುಶ್ ಹಿಮಾಲಯ ಪ್ರದೇಶದಲ್ಲಿರುವ ಹಿಮವು ವೇಗವಾಗಿ ಕರಗುತ್ತಿರುವುದರಿಂದ ನೀರ್ಗಲ್ಲುಗಳು ಕುಗ್ಗತೊಡಗಿವೆ. ಇದರಿಂದಾಗಿ ಆಸುಪಾಸಿನಲ್ಲಿ ಬೃಹತ್ ಸರೋವರಗಳು ಸೃಷ್ಟಿಯಾಗುತ್ತಿವೆ.

ಅಸ್ಥಿರವಾದ ಜಲ್ಲಿಕಲ್ಲು, ಬಂಡೆಗಲ್ಲುಗಳು ಹಾಗೂ ಕೆಸರುಮಣ್ಣಿನಿಂದ ಆವೃತವಾದ ಪ್ರದೇಶಗಳನ್ನು ಆಕ್ರಮಿಸಿಕೊಂಡ ಈ ಸರೋವರಗಳು ಆವರಿಸಿಕೊಂಡಿರುವ ಬೃಹತ್ ಪ್ರಮಾಣದ ನೀರನ್ನು ನಿಯಂತ್ರಿಸಲು ಸಾಧ್ಯವಾಗದೆ ಇದ್ದಾಗ ಹಿಮಪ್ರವಾಹ ಉಂಟಾಗುತ್ತದೆ ಎಂದು ಕಠ್ಮಂಡು ಮೂಲದ ಸಮಗ್ರ ಪರ್ವತಪ್ರದೇಶ ಅಭಿವೃದ್ಧಿಗಾಗಿನ ಅಂತರ್‌ರಾಷ್ಟ್ರೀಯ ಕೇಂದ್ರವು ಸಿದ್ಧಪಡಿಸಿದ ವರದಿ ಹೇಳಿದೆ.

2013ರಲ್ಲಿ ಮೇಘಸ್ಫೋಟದಿಂದಾಗಿ ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳವಾದ ಕೇದಾರನಾಥ ಪ್ರವಾಹಪೀಡಿತವಾದಾಗ, ಗಂಗಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಅನೇಕ ನೀರ್ಗಲ್ಲುಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಆದರೆ ಕಳೆದ ವಾರ ಹಿಮಪಾತ ಸಂಭವಿಸಿದ ನಂದಾದೇವಿ ಜೈವಿಕವಲಯ ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಯಾಕೆಂದರೆ ಅದು ತಲುಪಲು ಅತ್ಯಂತ ಕಷ್ಟಕರವಾಗಿರುವಂತಹ ದುರ್ಗಮ ಪ್ರದೇಶವಾಗಿದೆ. ನೀರ್ಗಲ್ಲು ಸ್ಫೋಟದಿಂದಾಗಿ ಉಂಟಾಗುವ ಪ್ರವಾಹವು ಹವಾಮಾನ ಬದಲಾವಣೆಯ ನೇರ ಪರಿಣಾಮವೆಂಬುದನ್ನು ವಿಜ್ಞಾನಿಗಳು ಒಕ್ಕೊರಲಿನಿಂದ ಹೇಳಿದ್ದಾರೆ. ಪರ್ವತ ಇಳಿಜಾರು ಪ್ರದೇಶಗಳಲ್ಲಿ ಉಂಟಾಗುವ ಅಸ್ಥಿರ ಪರಿಣಾಮವನ್ನು ನಿರ್ಲಕ್ಷಿಸಿ ಹಿಂದೂ ಕುಶ್ ಹಿಮಾಲಯ ಶ್ರೇಣಿ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳಿಗಾಗಿ ಅಣೆಕಟ್ಟುಗಳು ಹಾಗೂ ಸುರಂಗಮಾರ್ಗಗಳು ಮತ್ತು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಸರಕಾರವು ಅವೈಜ್ಞಾನಿಕವಾಗಿ ಜಾರಿಗೊಳಿಸಿರುವ ಯೋಜನೆಗಳು ಇಡೀ ಪ್ರದೇಶದ ಪರಿಸರ, ಜನಜೀವನಕ್ಕೆ ಮುಳುವಾಗುತ್ತಿವೆ.

 2013ರ ಉತ್ತರಾಖಂಡ ಪ್ರವಾಹದ ಬಳಿಕ ಭಾರತದ ಸುಪ್ರೀಂಕೋರ್ಟ್‌ನ ಆದೇಶದಂತೆ ರಚಿಸಲಾದ ತ್ರಿಸದಸ್ಯ ಸಮಿತಿಯು ಸಮುದ್ರಮಟ್ಟಕ್ಕಿಂತ 2 ಸಾವಿರ ಮೀಟರ್ ಎತ್ತರದ ಪ್ರದೇಶದಲ್ಲಿ ಯಾವುದೇ ಅಣೆಕಟ್ಟನ್ನು ನಿರ್ಮಿಸಬಾರದೆಂದು ಶಿಫಾರಸು ಮಾಡಿತ್ತು. ಹಿಮಪ್ರವಾಹವು ಇಳಿಮುಖವಾಗಿದೆಯಾದರೂ ಅವು ಅಣೆಕಟ್ಟುಗಳು ಹಾಗೂ ಸುರಂಗಮಾರ್ಗಗಳಿಗೆ ಯೋಗ್ಯವಲ್ಲದಂತಹ ಕೆಸರು ಮಣ್ಣು ಹಾಗೂ ಬಂಡೆಗಲ್ಲುಗಳ ಅಪಾರ ರಾಶಿಯನ್ನೇ ಬಿಟ್ಟುಹೋಗಿದೆ. ಧೌಲಿಗಂಗಾ ಪ್ರದೇಶದಲ್ಲಿ ಪ್ರಸ್ತಾವಿತ ಆರು ಅಣೆಕಟ್ಟುಗಳನ್ನು ನಿರ್ಮಿಸಲೇ ಕೂಡದೆಂದು ತ್ರಿಸದಸ್ಯ ಸಮಿತಿ ಸ್ಪಷ್ಟವಾಗಿ ತಿಳಿಸಿತ್ತು.

ಹಿಮಪ್ರವಾಹದಿಂದ ಭೀಕರವಾಗಿ ಹಾನಿಗೀಡಾಗಿರುವ ಹೃಷಿಗಂಗಾ ಜಲವಿದ್ಯುತ್ ಯೋಜನೆಯನ್ನು ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮವು ನಿರ್ಮಿಸುತ್ತಿದೆ. ಇಷ್ಟೇ ಅಲ್ಲದೆ ಹಿಮಾಲಯ ಪ್ರದೇಶದ ಪ್ರಸ್ತಾವಿತ 24 ಅಣೆಕಟ್ಟು ಯೋಜನೆಗಳ ಪೈಕಿ 23ನ್ನು ರದ್ದುಪಡಿಸುವಂತೆಯೂ ಅದು ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಸಂಬಂಧಪಟ್ಟವರು ಗಂಭೀರವಾಗಿ ಸ್ವೀಕರಿಸಿಲ್ಲ. ಮೇಲಿನೆಲ್ಲ ಅಂಶಗಳು, ಉತ್ತರಾಖಂಡದ ವಿಕೋಪದಲ್ಲಿ ಮನುಷ್ಯನ ಪಾತ್ರ ಬಹುದೊಡ್ಡದಿದೆ ಎನ್ನುವುದನ್ನು ಹೇಳುತ್ತವೆ. ಆದುದರಿಂದ, ಉತ್ತರಾಖಂಡದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಲ್ಲಿ ಮನುಷ್ಯರಿಂದ ನಡೆಯುತ್ತಿರುವ ಪ್ರಕೃತಿ ಮೇಲಿನ ಹಸ್ತಕ್ಷೇಪಗಳನ್ನು ತಡೆಯಬೇಕಾಗಿದೆ. ಇಲ್ಲವಾದರೆ ಉತ್ತರಾಖಂಡ ಪದೇ ಪದೇ ಇಂತಹ ದುರಂತಗಳಿಗೆ ಸಾಕ್ಷಿಯಾಗಬೇಕಾಗುತ್ತದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News