ದಲಿತ ಯುವತಿಗೆ ವರದಕ್ಷಿಣೆ ಕಿರಕುಳ ಆರೋಪ: ಬಿಜೆಪಿ ಮುಖಂಡನ ಬಂಧನಕ್ಕೆ ದಸಂಸ ಒತ್ತಾಯ

Update: 2021-02-11 17:25 GMT

ಮೈಸೂರು,ಫೆ.11: ಬಿಜೆಪಿ ಮುಖಂಡ ಚಿದಂಬರ ಎಂಬಾತ ದಲಿತ ಯುವತಿಯನ್ನು ಮದುವೆಯಾಗಿ, ವರದಕ್ಷಿಣೆ ಕಿರುಕುಳ ನೀಡುವುದಲ್ಲದೇ ವಿಚ್ಛೇಧನ ನೀಡಲು ಮುಂದಾಗಿದ್ದು ಈತನ ವಿರುದ್ಧ ಮೈಸೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಈತನನ್ನು ಬಂಧಿಸಬೇಕು ಎಂದು ದಲಿತ ಸಂಘರ್ಷ ಸಮತಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. 

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಗುಲ್ಬರ್ಗ ಮೂಲದ ಶಿವಾಜಿ ಎಂಬವರ ಪುತ್ರಿಯನ್ನು ಚಿದಂಬರನು ಜೀವನ್ ಸಾತಿ ಎಂಬ ವೆಬ್‍ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯೊಂದಿಗೆ ಒಂದು ವರ್ಷಗಳ ಕಾಲ ಪ್ರೀತಿಯ ನಾಟಕವಾಡಿ ತಮ್ಮ ಮನೆಯವರ ಸಹಕಾರದಿಂದ ಆಕೆಯ ಮನೆಯವರನ್ನು ನಂಬಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನ ಬೆಳ್ಳಿ ಆಭರಣಗಳನ್ನು ಪಡೆದು ಮೇ.10. 2020 ರಂದು ಮೈಸೂರು ತಾಲೂಕಿನ ತನ್ನ ಫಾರ್ಮ್ ಹೌಸ್‍ನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮದುವೆಯಾಗಿದ್ದಾನೆ ಎಂದರು. 

ಮದುವೆಯಾದ ಕೆಲವೇ ದಿನಗಳಲ್ಲಿ ಹಂತ ಹಂತವಾಗಿ ಪತ್ನಿಯ ಬ್ಯಾಂಕ್ ಖಾತೆಯಿಂದ 7.5 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಮತ್ತೆ ಹೆಚ್ಚಿನ ಹಣಕ್ಕೆ ಪೀಡಿಸಿ ಹಣಕೊಡದ ಕಾರಣವನ್ನೇ ನೆಪ ಮಾಡಿಕೊಂಡು ಪ್ರತ್ಯೇಕ ಊಟ ನೀಡಿ, ದೇವರ ಕೋಣೆಗೆ ಪ್ರವೇಶ ನಿರಾಕರಣೆ ಸೇರಿದಂತೆ ಮನೆಯೊಳಗೆ ಜಾತಿ ಹೆಸರಿನಲ್ಲಿ ನಿಂದಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ. ಅಲ್ಲದೇ, ಆಷಾಢ ಮಾಸದ ನೆಪದಲ್ಲಿ ತನ್ನ ಪತ್ನಿಯನ್ನು ತಾಯಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಒಂದು ಲಕ್ಷ ರೂ. ಹಣ ಪಡೆದು ವಾಪಸ್ ಬಂದಿದ್ದಾನೆ ಎಂದು ಆರೋಪಿಸಿದರು.

ಮತ್ತೆ ನಾಲ್ಕೇ ತಿಂಗಳಲ್ಲಿ ವಿವಾಹ ವಿಚ್ಛೇದನ ತಿಳುವಳಿಕೆ ಪತ್ರವನ್ನು ತವರು ಮನೆಯಲ್ಲಿದ್ದ ತನ್ನ ಪತ್ನಿಗೆ ಕಳುಹಿಸಿದ್ದಾನೆ. ಇದರಿಂದ ನೊಂದ ಯುವತಿ ಮತ್ತು ಅವರ ಕುಟುಂಬ ಮೈಸೂರಿನ ಕುವೆಂಪು ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಬಿಜೆಪಿ ಪಕ್ಷದ ನಗರಪಾಲಿಕೆ ಸದಸ್ಯ ಮಂಜುನಾಥ್ ಮತ್ತು ವಿಶ್ವಪ್ರಕಾಶ್ ಮದ್ಯಪ್ರವೇಶ ಮಾಡಿ ಚಿದಂಬರನ ವಿರುದ್ಧ ದೂರು ದಾಖಲಾಗದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ನ್ಯಾಯ ಕೊಡಿಸುವುದಾಗಿ ನಂಬಿಸಿ ಅರ್ಜಿದಾರರನ್ನು ವಾಪಸ್ ತವರೂರಿಗೆ ಕಳುಹಿಸಿದ್ದಾರೆ. ಫೆ.5 ರಂದು ನಗರಕ್ಕೆ ವಾಪಸ್ ಆದ ಸಂತ್ರಸ್ತೆ ತಾಯಿಯೊಂದಿಗೆ ಗಂಡನ ಮನೆಗೆ ಹೋಗಿದ್ದಾರೆ. ಚಿದಂಬರ ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕಾರನ್ನು ಹೆಂಡತಿ ಮೇಲೆ ಚಲಾಯಿಸಿ ಕೊಲ್ಲಲು ಯತ್ನಿಸಿದ್ದಾನೆ. ಈ ಹಿನ್ನಲೆಯಲ್ಲಿ ಆರೋಪಿಗಳಾದ ಚಿದಂಬರ್, ಇವರ ತಂದೆ, ತಾಯಿ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ವರದಕ್ಷಿಣೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ತಕ್ಷಣ ಮೂವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಡದೊರೆ ಮಹಾದೇವಯ್ಯ, ದೇವರಾಜು, ಬೊಕ್ಕಳ್ಳಿ ಮಹದೇವಸ್ವಾಮಿ, ಬಸವಟ್ಟಿಗೆ ನಾಗೇಂದ್ರ, ತಳೂರು ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News