ಸ್ವಾಯತ್ತ ವಿವಿಗಳ ಎಂಬಿಬಿಎಸ್ ಸೀಟುಗಳು ಶ್ರೀಮಂತರಿಗೆ ಮೀಸಲು: ವರದಿ

Update: 2021-02-13 06:38 GMT

ಹೊಸದಿಲ್ಲಿ, ಫೆ.13: ದೇಶದ ಸ್ವಾಯತ್ತ ವಿಶ್ವವಿದ್ಯಾನಿಲಯಗಳಲ್ಲಿನ ಎಂಬಿಬಿಎಸ್ ಸೀಟುಗಳು ದಪ್ಪ ಜೇಬಿನವರಿಗೆ ಹರಾಜಾಗುತ್ತಿವೆ ಎಂಬ ವರದಿಗಳಿಗೆ ಸ್ಪಂದಿಸಿ ಕೇಂದ್ರೀಯ ಕೌನ್ಸಿಲಿಂಗ್ ವಿಧಾನದ ಮೂಲಕ ಅವುಗಳನ್ನು ಭರ್ತಿ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದರೂ, ಇಂದಿಗೂ ಈ ವಿವಿಗಳ ಸೀಟುಗಳು ಶ್ರೀಮಂತರ ಮೀಸಲು ಸ್ಥಾನಗಳಾಗಿಯೇ ಮುಂದುವರಿದಿವೆ ಎಂದು timesofindia.com ವರದಿ ಮಾಡಿದೆ.

ತೀರಾ ಅಧಿಕ ಶುಲ್ಕದ ಹಿನ್ನೆಲೆಯಲ್ಲಿ 48 ಸ್ವಾಯತ್ತ ವಿಶ್ವವಿದ್ಯಾನಿಲಯಗಳ 8,000ಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳಿಗೆ ಪೈಪೋಟಿ ತೀರಾ ಕಡಿಮೆ. ಪ್ರತಿ ಸೀಟಿಗೆ 2018ರಲ್ಲಿ ಮೂವರು ಅಭ್ಯರ್ಥಿಗಳಿದ್ದರೆ, 2019ರಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಇರುವುದು ಲಭ್ಯವಿರುವ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ತಿಳಿದುಬರುತ್ತದೆ. ಸ್ವಾಯತ್ತ ವಿಶ್ವವಿದ್ಯಾನಿಲಯಗಳ ಹೊರಗಿನ ಪ್ರತಿ ಎಂಬಿಬಿಎಸ್ ಸೀಟುಗಳಿಗೆ 2018ರಲ್ಲಿ 21 ಅರ್ಜಿಗಳು ಸಲ್ಲಿಕೆಯಾಗಿದ್ದರೆ 2019ರಲ್ಲಿ ಈ ಪ್ರಮಾಣ 18ರಷ್ಟಿದೆ ಎಂದು ವರದಿ ತಿಳಿಸಿದೆ.

ಸ್ವಾಯತ್ತ ವಿವಿಗಳ ಶುಲ್ಕ ವಾರ್ಷಿಕ 20 ಲಕ್ಷದಿಂದ 25 ಲಕ್ಷ ಇದ್ದು, ಎನ್‌ಆರ್‌ಐ ಕೋಟಾ ಸೀಟುಗಳಿಗೆ ಇನ್ನೂ ಹೆಚ್ಚಿನ ಶುಲ್ಕವಿದೆ. 2019ರ ನೀಟ್‌ನಲ್ಲಿ 8 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರೂ, ಸ್ವಾಯತ್ತ ವಿವಿಗಳ 7099 ಸೀಟುಗಳಿಗೆ ಅರ್ಜಿ ಸಲ್ಲಿಸಿದವರು ಕೇವಲ 26 ಸಾವಿರ ಮಂದಿ ಮಾತ್ರ. ಅಂತೆಯೇ 2018ರಲ್ಲಿ ಅರ್ಹತೆ ಪಡೆದ 29 ಸಾವಿರ ಮಂದಿಯ ಪೈಕಿ ಸ್ವಾಯತ್ತ ವಿವಿಗಳಿಗೆ ಅರ್ಜಿ ಸಲ್ಲಿಸಿದವರು 6204 ಮಂದಿ.

ವೈದ್ಯಕೀಯ ಕೌನ್ಸಿಲಿಂಗ್ ಸಮಿತಿ ನಿಗದಿಪಡಿಸಿರುವ ಓಬಿಸಿ, ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳು ಸ್ವಾಯತ್ತ ವಿವಿಗಳಲ್ಲಿ ಅರ್ಜಿ ಸಲ್ಲಿಸುತ್ತಿಲ್ಲ. ಇದರ ಪರಿಣಾಮವಾಗಿ ಈ ಸೀಟುಗಳು ಶ್ರೀಮಂತರಿಗೇ ಮೀಸಲಾದಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News