ಪಡಿತರದಲ್ಲಿ ಅಕ್ಕಿಯೊಂದಿಗೆ ರಾಗಿ, ಜೋಳ ವಿತರಣೆಗೆ ಕೇಂದ್ರದ ಅನುಮೋದನೆ: ಸಚಿವ ಉಮೇಶ್ ಕತ್ತಿ

Update: 2021-02-13 13:15 GMT

ಬೆಳಗಾವಿ, ಫೆ. 13: ಸ್ಥಳೀಯರ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ಚೀಟಿ ಫಲಾನುಭವಿಗಳಿಗೆ ಅಕ್ಕಿಯೊಂದಿಗೆ ರಾಗಿ ಮತ್ತು ಜೋಳ ವಿತರಣೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಪಡಿತರದಲ್ಲಿ ಅಕ್ಕಿ-ಗೋಧಿ ವಿತರಣೆಯ ಪ್ರಮಾಣ ಕಡಿತಗೊಳಿಸಲಾಗುವುದು. ಹಿಂದೆ ವಿತರಣೆ ಮಾಡುವ ರೀತಿಯಲ್ಲಿಯೇ ರಾಗಿ, ಜೋಳ ಅಥವಾ ಸ್ಥಳೀಯವಾಗಿ ಬಳಕೆಯಲ್ಲಿರುವ ಆಹಾರ ಧಾನ್ಯ ವಿತರಿಸಲು ಅವಕಾಶ ಕೊಡುವಂತೆ ಕೇಂದ್ರ ಆಹಾರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ಹಾಗೂ ದಕ್ಷಿಣ ಕರ್ನಾಟಕ ಸೇರಿದಂತೆ ಮೈಸೂರು ಭಾಗದ ಜಿಲ್ಲೆಗಳಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಕೊಡಲಾಗುವುದು ಎಂದ ಅವರು, ಸ್ಥಳೀಯ ಆಹಾರ ಪದ್ಧತಿಯನ್ನು ಆಧರಿಸಿ ಪಡಿತರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.

ಬಿಪಿಎಲ್ ಫಲಾನುಭವಿಗಳಿಗೆ ನೀಡುವ ಒಟ್ಟು ಪಡಿತರ ಪ್ರಮಾಣದಲ್ಲಿ ಯಾವುದೇ ಕಾರಣಕ್ಕೂ ಕಡಿತಗೊಳಿಸುತ್ತಿಲ್ಲ. ಬದಲಾವಣೆಯನ್ನೇ ಮಾಡುತ್ತೇವೆ. ಜನರು ಏನು ತಿನ್ನಲು ಬಯಸುತ್ತಾರೆಯೋ ಆ ಆಹಾರ ಪದಾರ್ಥಗಳನ್ನು ನೀಡಲು ಸರಕಾರ ಕ್ರಮ ವಹಿಸಲಿದೆ ಎಂದ ಅವರು, ಸಂಪೂರ್ಣವಾಗಿ ಅಕ್ಕಿಯನ್ನೇ ಕೊಡಿ ಎಂದು ಜನರು ಒತ್ತಾಯಿಸಿದರೆ ಅಕ್ಕಿಯನ್ನೇ ನೀಡುತ್ತೇವೆ ಎಂದರು.

ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಎ.1ರಿಂದ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುವುದು ಎಂದ ಉಮೇಶ್, ಪಡಿತರ ವ್ಯವಸ್ಥೆಯನ್ನು ಸುಧಾರಣೆ ತರಲಾಗುವುದು. ಅಲ್ಲದೆ, ಅನರ್ಹರು ಪಡಿತರ ಚೀಟಿ ಪಡೆದಿದ್ದರೆ ಅವುಗಳನ್ನು ರದ್ದುಪಡಿಸಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲವ್ ಲೆಟರ್ ಬೇಡವೆಂದರೂ ಬರುತ್ತಿರುತ್ತವೆ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದಾಗ ನಾನು ಪ್ರತಿಭಟನೆ ನಡೆಸುತ್ತೇನೆ. ಮಂತ್ರಿಯಾಗಿದ್ದೇನೆಂದು ಸುಮ್ಮನಿರುವುದಿಲ್ಲ. ಯಾರೋ ಹೇಳಿದರೆಂದು ಮಾಡುವುದಿಲ. ಯತ್ನಾಳ್ ಮತ್ತು ನಾವು ಎಲ್ಲ ಸ್ನೇಹಿತರು’

-ಉಮೇಶ್ ಕತ್ತಿ, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News