‘ಭದ್ರಾ’ ರಾಷ್ಟ್ರೀಯ ಯೋಜನೆಯನ್ನಾಗಿ ಪ್ರಕಟಿಸಲು ಕೇಂದ್ರಕ್ಕೆ ಮನವಿ: ಸಚಿವ ರಮೇಶ್ ಜಾರಕಿಹೊಳಿ

Update: 2021-02-13 13:24 GMT

ಬೆಳಗಾವಿ, ಫೆ. 13: ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಪ್ರಕಟಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದು, ಇದೇ ವಿಚಾರಕ್ಕೆ ಫೆ.21ಕ್ಕೆ ಹೊಸದಿಲ್ಲಿಗೆ ತೆರಳುತ್ತಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಪ್ರವಾಸ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತೇನೆ. ಇದರಿಂದ ಯೋಜನೆ ಅನುಷ್ಠಾನಕ್ಕೆ ಕೇಂದ್ರ ನೆರವು ದೊರೆಯಲಿದೆ ಎಂದರು.

ವಿಜಯಪುರದ ಆಲಮಟ್ಟಿಯ ಕೃಷ್ಣಾ ಯೋಜನೆಯನ್ನೂ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಸರಕಾರ ಪ್ರಯತ್ನ ನಡೆಸಿದೆ ಎಂದ ಅವರು, ಈ ಯೋಜನೆಯಡಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಶೇ.90ರಷ್ಟು ಅನುದಾನ ಸಿಗುತ್ತದೆ. ರಾಷ್ಟ್ರೀಯ ಯೋಜನೆಗಳಿಗೆ ರಾಜ್ಯ ಸರಕಾರ ಕೇವಲ ಶೇ.10ರಷ್ಟು ಅನುದಾನ ನೀಡಿದರೆ ಸಾಕು. ಹೀಗಾಗಿ, ಯೋಜನೆಗಳು ತೀವ್ರಗತಿಯಲ್ಲಿ ಅನುಷ್ಠಾನಕ್ಕೆ ತರಲು ಅನುಕೂಲವಾಗಲಿದೆ ಎಂದರು.

ಮಹದಾಯಿ ನ್ಯಾಯಾಧೀಕರಣದ ತೀರ್ಪು ರಾಜ್ಯದ ಪರವಾಗಿದ್ದು, ಶೀಘ್ರದಲ್ಲೇ ದಿಲ್ಲಿಗೆ ತೆರಳಿ ಆದಷ್ಟು ಬೇಗ ಮಹದಾಯಿ ಕಾಮಗಾರಿ ಆರಂಭದ ಬಗ್ಗೆ ಚರ್ಚೆ ಮಾಡಲಾಗುವುದು ಎಂದ ಅವರು, ಕೋರ್ಟ್ ಆದೇಶದನ್ವಯ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಸರಕಾರ ಕ್ರಮ ವಹಿಸಲಿದೆ ಎಂದರು.

ಮಹದಾಯಿ ವಿಚಾರವಾಗಿ ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳು ಎಷ್ಟೇ ತಕರಾರು ತೆಗೆದರೂ ನ್ಯಾಯ ನಮ್ಮ ಪರ ಇರುವುದರಿಂದ ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ನಮಗೆ ಇನ್ನೂ ಜಾಸ್ತಿ ನೀರು ಸಿಗಲಿದೆ ಎಂದ ಅವರು, ಮಹದಾಯಿ ವಿಚಾರವಾಗಿ ನಮ್ಮಲ್ಲಿ ಪಕ್ಷಾತೀತವಾಗಿ ಒಗ್ಗಟ್ಟು ಇದೆ ಎಂದರು.

ಮಹದಾಯಿ ಯೋಜನೆಗೆ ಸಿಡಬ್ಲೂಸಿ ಒಪ್ಪಿಗೆ ಸಿಕ್ಕಿದೆ. ಆದಷ್ಟು ಬೇಗ ಕೇಂದ್ರ ಸರಕಾರದ ಅನುಮತಿ ಪಡೆದು ಕಾಮಗಾರಿ ಆರಂಭ ಮಾಡುತ್ತೇವೆ ಎಂದ ಅವರು, ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾಂಬ್ರಾ- ಬಾಗಲಕೋಟೆ ರಸ್ತೆಯನ್ನ ಚತುಷ್ಪಥ ರಸ್ತೆ ಮಾಡಲು ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News