ಮೀಸಲಾತಿ ಹೋರಾಟದಿಂದ ಸಿದ್ದರಾಮಯ್ಯಗೆ ಅಭದ್ರತೆ ಕಾಡುತ್ತಿದೆ: ಜಗದೀಶ್ ಶೆಟ್ಟರ್

Update: 2021-02-13 15:59 GMT

ಹುಬ್ಬಳ್ಳಿ, ಫೆ.13: ಕುರುಬ ಸಮುದಾಯದ ಮೀಸಲಾತಿ ಹೋರಾಟವನ್ನು ಗಮನಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭದ್ರತೆ ಕಾಡುತ್ತಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬರ ನಾಯಕನೆಂದು ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯಗೆ ಲಕ್ಷಾಂತರ ಜನ ಸೇರಿದ್ದ ಸಮಾವೇಶಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದಾದ ಮುಜುಗರ ತಪ್ಪಿಸಿಕೊಳ್ಳಲು ಆರೆಸ್ಸೆಸ್ ಹೆಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೀಸಲಾತಿ ಹೋರಾಟ ಎಂಬುದು ಇಂದು, ನಿನ್ನೆಯದಲ್ಲ. ಆಯಾ ಸಮಾಜದ ಸ್ವಾಮೀಜಿಗಳು ಹಾಗೂ ಹಿರಿಯರು ಇದಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಮೀಸಲಾತಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ನಾಯಕತ್ವಕ್ಕೆ ಎದುರಾಗಿರುವ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಕುರುಬ ಸಮಾಜದ ಹೋರಾಟದ ಹಿಂದೆ ರಾಷ್ಟ್ರೀಯ ಸ್ವಯಂಸೇವಕಸಂಘವಿದೆಯೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಎಲ್ಲದಕ್ಕೂ ಆರೆಸ್ಸೆಸ್‍ನ್ನು ಗುರಿಯಾಗಿರಿಸಿ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News