ಚಿಕ್ಕಮಗಳೂರು: ಅಮೃತ್ ಮಹಲ್ ಗೋ ಸಂವರ್ಧನಾ ಕೇಂದ್ರದಲ್ಲಿ ಕರುಗಳ ಸಾವಿನ ಸರಣಿ

Update: 2021-02-15 03:36 GMT

ಚಿಕ್ಕಮಗಳೂರು, ಫೆ.14: ಗೋವುಗಳ ಸಂತತಿಯನ್ನು ಸಂರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ರಾಜ್ಯ ಸರಕಾರ ರೈತರ ವಿರೋಧದ ಮಧ್ಯೆಯೂ ಗೋಹತ್ಯೆ ನಿಷೇದ ಕಾಯ್ದೆಯನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಆದರೆ ರಾಜ್ಯ ಸರಕಾರದ ಅಧೀನದಲ್ಲಿರುವ, ಸರಕಾರವೇ ಸಂರಕ್ಷಣೆ ಮಾಡುತ್ತಿರುವ, ಅಳಿವಿನಂಚಿನಲ್ಲಿರುವ ರಾಜ್ಯದ ಪ್ರಸಿದ್ಧ ಗೋತಳಿಯಾದ ಅಜ್ಜಂಪುರದ ಅಮೃತ್ ಮಹಲ್ ಸಂತತಿಯ ಕರುಗಳು ಸಾವನ್ನಪ್ಪುತ್ತಿದ್ದರೂ ಕರುಗಳ ಸಾವಿನ ನಿಯಂತ್ರಣಕ್ಕೆ ಸರಕಾರ ಕ್ರಮವಹಿಸಿಲ್ಲ ಎಂಬ ಆರೋಪ ಸಾರ್ವಜನಿಕರು, ರೈತರಿಂದ ಕೇಳಿ ಬರುತ್ತಿವೆ.

ಅಮೃತ್ ಮಹಲ್ ತಳಿ ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಗೋವುಗಳ ತಳಿಯಾಗಿದೆ. ಅಮೃತ್ ಮಹಲ್ ಗೋವುಗಳು ತಮ್ಮ ದೈತ್ಯಾಕಾರದ ದೇಹ ರಚನೆ, ಬಲಿಷ್ಠತೆಗೆ ಹೆಸರುವಾಸಿಯಾಗಿದೆ. ಪುರಾತನ ಕಾಲದಿಂದಲೂ ಅಮೃತ್ ಮಹಲ್ ಗೋ ತಳಿಗಳು ತಮ್ಮದೇಯಾದ ಇತಿಹಾಸವನ್ನು ಹೊಂದಿವೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅಮೃತ್ ಮಹಲ್ ತಳಿಯ ಗೋವುಗಳನ್ನು ಯುದ್ಧದ ಸಂದರ್ಭದಲ್ಲೂ ಬಳಸಿಕೊಂಡಿರುವುದಕ್ಕೆ ಪುರಾವೆಗಳಿದ್ದು, ಈ ತಳಿಯ ಗೋವುಗಳನ್ನು ರಾಜರ ಕಾಲದಲ್ಲಿ ಭಾರದ ವಸ್ತುಗಳು, ಕಲ್ಲುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಲು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿತ್ತು. ಇವುಗಳ ಸಾಮರ್ಥ್ಯ ಕಂಡ ಮಹಾರಾಜರು ಅಮೃತ್ ಮಹಲ್ ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಟಿಪ್ಪು ಸುಲ್ತಾನ್, ಮೈಸೂರು ಮಹಾರಾಜರೂ ಈ ತಳಿಯ ರಾಸುಗಳ ಸಂರಕ್ಷಣೆಗೆ ಒತ್ತು ನೀಡಿದ್ದರು.

ದೈತ್ಯ ದೇಹವನ್ನು ಹೊಂದಿರುವ ಅತ್ಯಂತ ಶಕ್ತಿಯುತವಾದ ಅಮೃತ್ ಮಹಲ್ ಗೋ ತಳಿಯ ಸಂವರ್ಧನೆಗೆ ರಾಜ್ಯ ಸರಕಾರವೂ ಆದ್ಯತೆ ನೀಡುತ್ತಿದ್ದು, ಇದಕ್ಕಾಗಿ ಕೋಟ್ಯಂತರ ರೂ. ವ್ಯಯಿಸುವುದರೊಂದಿಗೆ ಸರಕಾರ ಅಮೃತ್ ಮಹಲ್ ತಳಿಗಳ ಹರಾಜಿನಿಂದಲೂ ಕೋಟ್ಯಂತರ ರೂ. ಆದಾಯವನ್ನೂ ಗಳಿಸುತ್ತಿದೆ. ಅಮೃತ್ ಮಹಲ್ ಗೋತಳಿಗಳ ಸಂರಕ್ಷಣೆ, ಸಂವರ್ಧನೆಗಾಗಿ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಅಮೃತ್ ಮಹಲ್ ಕಾವಲ್ ಗೋ ಸಂವರ್ಧನಾ ಕೇಂದ್ರವನ್ನು ಹಿಂದೆಯೇ ತೆರೆಯಲಾಗಿದೆ. ಸರಕಾರ ಈ ತಳಿಗಳ ಸಂವರ್ಧನೆಗೆ ಸಾಕಷ್ಟು ಹಣವನ್ನು ವಿನಿಯೋಗಿಸಲಾಗುತ್ತಿದೆ. ಆದರೆ, ಈ ಕೇಂದ್ರದಲ್ಲಿ ಅಮೃತ್ ಮಹಲ್ ತಳಿಯ ಕರುಗಳು ಈ ಭಾರೀ ಪ್ರಮಾಣದಲ್ಲಿ ಸಾವನ್ನಪ್ಪಿದ್ದು, ಕರುಗಳ ಸಾವಿನ ಸರಣಿ ಇಂದಿಗೂ ಮುಂದುವರಿದಿವೆ. ಆದರೆ ಕರುಗಳು ಯಾವ ಕಾರಣದಿಂದ ಸಾವನ್ನಪ್ಪುತ್ತಿವೆ ಎಂಬುದನ್ನು ಸರಕಾರ ಪತ್ತೆಗೆ ಮುಂದಾಗಿಲ್ಲ ಎನ್ನಲಾಗುತ್ತಿದ್ದು, ಸಂವರ್ಧನಾ ಕೇಂದ್ರದ ಅಧಿಕಾರಿಗಳೂ ಈ ಸಂಬಂಧ ನಿರ್ಲಕ್ಷ್ಯ ವಹಿಸಿದ್ದಾರೆಂದು ಅಜ್ಜಂಪುರ ತಾಲೂಕಿನ ರೈತರು ಆರೋಪಿಸುತ್ತಿದ್ದಾರೆ.

ಅಜ್ಜಂಪುರ ಸಂವರ್ಧನಾ ಕೇಂದ್ರದಲ್ಲಿ 372 ರಾಸುಗಳಿದ್ದು, ತಾಲೂಕಿನ ಬಾಸೂರು ಕೇಂದ್ರದಲ್ಲಿ 301, ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ 394, ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿರುವ ರಾಯಸಂದ್ರಯಲ್ಲಿ 245, ಹಬ್ಬನಘಟ್ಟದಲ್ಲಿ 197, ಚಿತ್ರದುರ್ಗ ಜಿಲ್ಲೆಯ ರಾಮಗಿರಿಯಲಿ 266, ಚಿಕ್ಕೆಮ್ಮಿಗನೂರು ಕೇಂದ್ರದಲ್ಲಿ 339, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಕೇಂದ್ರದಲ್ಲಿ 107 (ಗಂಡು ತಳಿಗಳು ಮಾತ್ರ) ರಾಸುಗಳನ್ನು ಸದ್ಯ ಸಾಕಲಾಗುತ್ತಿದೆ. ಇಲ್ಲಿ ಸದೃಢವಾಗಿ ಬೆಳೆದು ನಿಂತ ರಾಸುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದ ಸರಕಾರಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿದೆ. 2020ರಲ್ಲಿ ಬೀರೂರು ಸಂವರ್ಧನಾ ಕೇಂದ್ರವೊಂದರಲ್ಲಿ ಅಮೃತ್ ಮಗಲ್ ತಳಿಯ ರಾಸುಗಳ ಹರಾಜು ಪ್ರಕ್ರಿಯೆಯಿಂದ ಸುಮಾರು 87 ಲಕ್ಷ ರೂ. ಆದಾಯ ಬಂದಿದೆ.

ಜಿಲ್ಲೆಯ ಅಜ್ಜಂಪುರ ಅಮೃತ್ ಮಹಲ್ ಸಂವರ್ಧನ ಕೇಂದ್ರದ ವ್ಯಾಪ್ತಿಗೊಳಪಟ್ಟಿರುವ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಒಟ್ಟು 8 ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರಗಳಿವೆ. ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ 795 ಎಕರೆ, ತರೀಕೆರೆಯ ಲಿಂಗದಹಳ್ಳಿ 1410, ಕಡೂರು ತಾಲೂಕಿನ ಬೀರೂರು ವ್ಯಾಪ್ತಿಯಲ್ಲಿ 861, ಬಾಸೂರು 1710, ರಾಯಸಂದ್ರ 1234 ಸೇರಿದಂತೆ ಒಟ್ಟು 68,247 ಎಕರೆ ಪ್ರದೇಶದಲ್ಲಿ ಅಮೃತ್ ಮಹಲ್ ರಾಸುಗಳನ್ನು ಸಾಕಲಾಗುತ್ತಿದೆ. ಪ್ರತೀ ಕೇಂದ್ರಗಳೂ 400-500 ರಾಸುಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ನಿರ್ವಹಣೆಗಾಗಿ ಸರಕಾರ ಸರಕಾರ ಕೋಟ್ಯಂತರ ರೂ. ವ್ಯಯಿಸುತ್ತಿದ್ದು, ಹರಾಜಿನ ಮೂಲಕ ಆದಾಯವನ್ನೂ ಗಳಿಸುತ್ತಿದೆ. ಗೋವುಗಳ ಆರೋಗ್ಯ ತಪಾಸಣೆ, ನಿರ್ವಹಣೆಗೆ ಪ್ರತ್ಯೇಕ, ಪಶು ವೈದ್ಯರು, ಸಿಬ್ಬಂದಿಯನ್ನೂ ನೇಮಿಸಲಾಗಿದೆ.

ಆದರೆ ಇಷ್ಟೆಲ್ಲ ಸೌಲಭ್ಯಗಳನ್ನು ಅಮೃತ್ ಮಹಲ್ ಕಾವಲ್ ಹೊಂದಿದ್ದರೂ ಆಗಾಗ್ಗೆ ಕರುಗಳು ಮೃತಪಡುತ್ತಿರುವುದು ಏಕೆ ಎಂಬುದು ಈ ಭಾಗದ ರೈತರು, ಸಾರ್ವಜನಿಕರ ಪ್ರಶ್ನೆಯಾಗಿದ್ದು, ಅಜ್ಜಂಪುರ ಕೇಂದ್ರವೊಂದರಲ್ಲೇ ಕಳೆದ ಕೆಲವು ತಿಂಗಳುಗಳಲ್ಲಿ 15ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿವೆ. ಕೇಂದ್ರದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕರುಗಳ ಸಾವಿನ ಸರಣಿ ನಿಯಂತ್ರಣಕ್ಕೂ ಕ್ರಮ ವಹಿಸಿಲ್ಲ, ಕರುಗಳ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ, ಕರುಗಳು ಯಾವ ಕಾರಣದಿಂದ ಸಾವನಪ್ಪುತ್ತಿವೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಗೋವುಗಳ ಸಂರಕ್ಷಣೆ ನೆಪದಲ್ಲಿ ರಾಜ್ಯ ಸರಕಾರ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು, ಪ್ರತೀ ತಾಲೂಕು ಕೇಂದ್ರಗಳಲ್ಲೂ ಗೋಶಾಲೆಗಳನ್ನು ತೆರೆಯುವ ಮಾತನಾಡುತ್ತಿದೆ. ಆದರೆ ಸರಕಾರದ ಅಧೀನದಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಕರುಗಳ ಸಾವನ್ನು ತಡೆಯಲು ಕ್ರಮವಹಿಸದ ಸರಕಾರ ಇನ್ನು ರಾಜ್ಯಾದ್ಯಂತ ಇರುವ ಗೋವುಗಳನ್ನು ಈ ಕಾಯ್ದೆ ಮೂಲಕ ಹೇಗೆ ಸಂರಕ್ಷಣೆ ಮಾಡುತ್ತದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಅಮೃತ್ ಮಹಲ್ ರಾಸುಗಳ ಸಂವರ್ಧನಾ ಕೇಂದ್ರಗಳಲ್ಲಿ ಅಮೃತ್ ಮಹಲ್ ತಳಿಯ ರಾಸುಗಳು ಆಗಾಗ್ಗೆ ಸಾವನ್ನಪ್ಪುತ್ತಿವೆ. ಕೇಂದ್ರದ ಅಧಿಕಾರಿಗಳು ಮತ್ತು ಸರಕಾರ ಕರುಗಳ ಸಾವು ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿಲ್ಲ. ಅಮೃತ್ ಮಹಲ್ ತಳಿಗಳಿಂದ ಸರಕಾರಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿದೆ. ತಳಿ ಸಂರಕ್ಷಣೆ ನಿಟ್ಟಿನಲ್ಲಿ ಕರುಗಳು ಸಾಯಲು ಅಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇನ್ನಾದರೂ ಸರಕಾರ ಕರುಗಳ ಸಾವು ತಡೆಯಲು ಅಗತ್ಯ ಕ್ರಮವಹಿಸಬೇಕಿದೆ.
- ನಿರಂಜನ್, ರೈತ ಮುಖಂಡರು, ಕಡೂರು

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News