ರಾಜ್ಯದ ರೈಲ್ವೇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-02-15 14:14 GMT

ಶಿವಮೊಗ್ಗ,ಫೆ.15: ಕೇಂದ್ರ ಸರ್ಕಾರವು ರಾಜ್ಯದ ವಿವಿಧ ಮಹತ್ವದ ರೈಲ್ವೇ ಯೋಜನೆಗಳಿಗೆ ಸುಮಾರು 4,000 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು 683 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರು ಸೋಮವಾರ ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಎಲ್.ಸಿ.ಗೇಟ್ ನಂ.34, 49 ಮತ್ತು 52ರ ಬದಲಾಗಿ ನಿರ್ಮಾಣಗೊಳ್ಳುತ್ತಿರುವ ಮೂರು ರೈಲ್ವೇ ಮೇಲ್ಸೇತುವೆಗಳ ಅಡಿಗಲ್ಲು ಸಮಾರಂಭದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲೊಂದಾಗಿರುವ ಶಿವಮೊಗ್ಗದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ರೈಲ್ವೇ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿದ್ದು, ಜಿಲ್ಲೆಯ ಜನರ ಬಹುದಿನಗಳ ಆಶೋತ್ತರಗಳಿಗೆ, ನಿರೀಕ್ಷೆಗಳಿಗೆ ಪೂರಕವಾಗಿದೆ ಎಂದರು.

ನಿರ್ಮಾಣಗೊಳ್ಳುವ ಮೂರು ರಸ್ತೆ ಮೇಲುಸೇತುವೆಗಳ ಅಂದಾಜು ವೆಚ್ಚ ರೂ. 116.31 ಕೋಟಿಗಳಾಗಿದ್ದು, ಇವುಗಳ ಕಾಮಗಾರಿಯ ವೆಚ್ಚದ ಶೇ. 50 ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರವು ರೈಲ್ವೆ ಇಲಾಖೆಯೊಂದಿಗೆ ಶೇಕಡಾ 50:50ರ ಅನುಪಾತದಲ್ಲಿ ಕಾಮಗಾರಿಯ ವೆಚ್ಚವನ್ನು ಹಂಚಿಕೆ ಮಾಡಿಕೊಳ್ಳುವುದಲ್ಲದೆ, ಅಗತ್ಯವಿರುವ ಭೂಮಿಯನ್ನು ತನ್ನ ವೆಚ್ಚದಲ್ಲಿಯೇ ಖರೀದಿ ಮಾಡಿ ರೈಲ್ವೆಗೆ ಹಸ್ತಾಂತರಿಸಲು ಒಪ್ಪಿಗೆ ನೀಡಿ 46 ಲೆವೆಲ್ ಕ್ರಾಸಿಂಗ್ ಗೇಟ್‍ಗಳನ್ನು ತೆರವುಗೊಳಿಸಿ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.

ಶಿವಮೊಗ್ಗವನ್ನು ದೇಶದ ಮಾದರಿ ನಗರವನ್ನಾಗಿ ನಿರ್ಮಿಸುವ ಕನಸು ತಮ್ಮದಾಗಿದ್ದು, ರೈಲ್ವೆ, ರಸ್ತೆ, ವಿಮಾನ ನಿಲ್ದಾಣ, ಬಂದರುಗಳು ಮುಂತಾದ ಅನೇಕ ಮೂಲಸೌಲಭ್ಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದ ಅವರು, ಶಿಕಾರಿಪುರ-ಶಿವಮೊಗ್ಗ ರೈಲ್ವೇ ಮಾರ್ಗದ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಸಕ್ತ ಗಿಣಿಗೆರಾ-ರಾಯಚೂರು, ಗದಗ-ವಾಡಿ, ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು-ಬೇಲೂರು, ಧಾರವಾಡ-ಬೆಳಗಾವಿ, ಶಿವಮೊಗ್ಗ-ರಾಣಿಬೆನ್ನೂರು ನೂತನ ರೈಲು ಮಾರ್ಗಗಳಿಗೆ ರಾಜ್ಯ ಸರ್ಕಾರವು ರೈಲ್ವೆ ಇಲಾಖೆಯೊಂದಿಗೆ ಶೇಕಡಾ 50 ರಷ್ಟು ವೆಚ್ಚವನ್ನು ಹಂಚಿಕೆ ಮಾಡಿಕೊಂಡಿದೆ. ಆರ್ಥಿಕ ವರ್ಷದಲ್ಲಿ 148 ಕೋಟಿ ರೂ.ಗಳ ಅನುದಾನವನ್ನು ಈ ಕಾಮಗಾರಿಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದರು.

ಶಿವಮೊಗ್ಗ-ರಾಣೆಬೆನ್ನೂರು ನೂತನ ರೈಲು ಮಾರ್ಗವು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ಮೊದಲನೆಯ ರೈಲು ಮಾರ್ಗವಾಗಿದೆ. ಕೇಂದ್ರವು ಈ ಯೋಜನೆಗೆ 2021-22ರ ಮುಂಗಡ ಪತ್ರದಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿರುವುದು ಶ್ಲಾಘನೀಯ ಎಂದ ಅವರು, ಉತ್ತಮ ರೈಲ್ವೆ ಸಂಪರ್ಕ ಹಾಗೂ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕ ಪ್ರಗತಿಯ ಚಿತ್ರಣವೇ ಬದಲಾಗಲಿದೆ ಎಂದು ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳು ಚುರುಕುಗೊಂಡಿವೆ. ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣದ ಕಾಮಗಾರಿ ಆರಂಭವಾಗಿದೆ. ಹೊರವಲಯದ ಸೋಗಾನೆ ಗ್ರಾಮದಲ್ಲಿ ಸುಮಾರು 662 ಎಕರೆ ಜಮೀನಿನಲ್ಲಿ 384 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ ವಿಮಾನ ನಿಲ್ದಾಣದ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತು ಇನ್ನಿತರ ಕಾಮಗಾರಿಗಳಿಗಾಗಿ ರೂ. 34.65 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವರ್ಚುವಲ್ ಮೀಡಿಯಾ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೇ ಸಚಿವ ಪಿಯೂಷ್‍ ಗೋಯಲ್ ಅವರು ಮಾತನಾಡಿ, ರಾಜ್ಯದಲ್ಲಿ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತೆ ಹಾಗೂ ಅನುದಾನದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ರೈಲ್ವೇ ಕ್ಷೇತ್ರದ ವಿಕಾಸದಿಂದಾಗಿ ಸಾರ್ವಜನಿಕ ಸಂಚಾರದಲ್ಲಿ ಸಮಯ ಉಳಿತಾಯ, ತ್ವರಿತ, ಸುರಕ್ಷಿತ ಹಾಗೂ ಕಡಿಮೆ ವೆಚ್ಚದಾಯಕವಾಗಿದೆ ಮಾತ್ರವಲ್ಲ ನಾಡಿನ ತಂತ್ರಜ್ಞಾನಾಧಾರಿತ ಉದ್ಯಮಗಳ ವಿಕಾಸಕ್ಕೆ ಅನುಕೂಲವಾಗಿದೆ ಎಂದರು.

ಅಲ್ಲದೆ ಸ್ಥಳೀಯವಾಗಿ ಪ್ರವಾಸೋದ್ಯಮ ಕ್ಷೇತ್ರ ವಿಕಾಸಗೊಂಡು ಇಲ್ಲಿನ ಸಂಸ್ಕೃತಿ, ಇತಿಹಾಸ ಎಲ್ಲೆಡೆ ಪಸರಿಸಲಿದೆ. ಅಲ್ಲದೆ ಸ್ಮಾರ್ಟ್‍ಸಿಟಿ ಯೋಜನೆಯಿಂದಾಗಿ ಶಿವಮೊಗ್ಗ ನಗರ ಬೆಳವಣಿಗೆಯಲ್ಲಿ ಇನ್ನಷ್ಟು ವೇಗ ಪಡೆದುಕೊಂಡಿದೆ. ಅರಸಾಳು ರೈಲ್ವೇ ನಿಲ್ದಾಣವನ್ನು ಆಕರ್ಷಕ ರೈಲ್ವೇ ನಿಲ್ಧಾಣವನ್ನಾಗಿ ಪರಿವರ್ತಿಸಿ, ಜನಾಕರ್ಷಣೀಯವನ್ನಾಗಿಸಿರುವುದು ವಿಶೇಷವೆನಿಸಿದೆ. ಈ ಮಾಲ್ಗುಡಿ ರೈಲು ನಿಲ್ದಾಣ ಮಲೆನಾಡಿನ ಜನರ ಸಂಪರ್ಕಕ್ಕೆ ಅನುಕೂಲವಾಗಿದೆ ಮಾತ್ರವಲ್ಲ ಜಗತ್ಪ್ರಸಿದ್ಧ ಜೋಗದ ಜಲಪಾತದ ವೀಕ್ಷಣೆಗೆ ದೇಶದ ಜನರನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಕೋಚಿಂಗ್ ಡಿಪೋ, ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಕಾಮಗಾರಿಗಳು ತ್ವರಿತವಾಗಿ ಆರಂಭಗೊಂಡು 2022ರ ಹೊತ್ತಿಗೆ ಪೂರ್ಣಗೊಳ್ಳಲಿವೆ. ತಿರುಪತಿ, ಚೆನ್ನೈ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗಗಳು ಎಂದಿನಂತೆ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ, ಪ್ರಯಾಣಿಕರ ಕಿರಿಕಿರಿ ಕಡಿಮೆ ಮಾಡಲು ಶಿವಮೊಗ್ಗ ಸಮೀಪದ ಕಡದಕಟ್ಟೆ ಬಳಿ 26 ಕೋಟಿ ರೂ. ವೆಚ್ಚದಲ್ಲಿ, ಉಷಾ ನರ್ಸಿಂಗ್ ಹೋಂ ಬಳಿ 60.76 ಕೋಟಿ ರೂ. ವೆಚ್ಚದಲ್ಲಿ ಮತ್ತು ಕಾಶೀಪುರದ 29.76 ಕೋಟಿ ರೂ. ವೆಚ್ಚದಲ್ಲಿ ಮೂರು ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಶಿವಮೊಗ್ಗದಿಂದ ರಾತ್ರಿ ಹೊರಟು ಬೆಳಿಗ್ಗೆ 3.45ಕ್ಕೆ ಬೆಂಗಳೂರು ತಲುಪುತ್ತಿದ್ದ ರೈಲು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. ಅಲ್ಲದೆ ಪ್ರತಿದಿನ ಬೆಳಿಗ್ಗೆ 5.30ಕ್ಕೆ ಹೊರಡುತ್ತಿದ್ದ ಜನಶತಾಬ್ದಿ ಯಶವಂತಪುರಕ್ಕೆ ತಲುಪುತ್ತಿತ್ತು. ಅದರ ವೇಳಾಪಟ್ಟಿಯನ್ನು ಅಲ್ಪಮಟ್ಟಿಗೆ ಮಾರ್ಪಡಿಸಿ, ಮೆಜೆಸ್ಟಿಕ್‍ಗೆ ತಲುಪಲಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ ಎಂದರು.

160 ಕೋಟಿ ರೂ.ಗಳ ವೆಚ್ಚದಲ್ಲಿ ಜೋಗವನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಚೆನ್ನೈ, ತಿರುಪತಿ ರೈಲು ಸಂಚಾರ ಪುನರಾರಂಭಗೊಳಿಸಲು ರೈಲ್ವೇ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಡಿ.ಆರ್.ಡಿ.ಓ.ಕೇಂದ್ರವನ್ನು ಶಿವಮೊಗ್ಗದಲ್ಲಿ ಆರಂಭಿಸುವಂತೆ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆಯನೂರು ಮಂಜುನಾಥ್, ಬಿ.ಕೆ.ಸಂಗಮೇಶ್ವರ್, ಎಸ್.ಕುಮಾರ್ ಬಂಗಾರಪ್ಪ, ಎಸ್.ರುದ್ರೇಗೌಡ, ಶ್ರೀಮತಿ ಭಾರತಿಶೆಟ್ಟಿ, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಶ್ರೀಮತಿ ಸುವರ್ಣಶಂಕರ್, ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರಾರಾಮಯ್ಯ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಚನ್ನಬಸಪ್ಪ, ಮೂಲಭೂತ ಸೌಕರ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕಪಿಲ್ ಮೋಹನ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಕೆ.ಪಿ.ಸ್ವಾಮಿ, ವಿಜಯ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಕಾಂತರಾಜು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News