ಇ-ಬುಕ್, ಆಡಿಯೋ ಬುಕ್ ಪ್ರಕಟನೆಗೆ ಅನುದಾನ: ಸಚಿವ ಅರವಿಂದ ಲಿಂಬಾವಳಿ

Update: 2021-02-17 17:24 GMT

ಬೆಂಗಳೂರು, ಫೆ.17: ಕನ್ನಡ ಪುಸ್ತಕ ಲೋಕ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬೆಳೆಯಬೇಕಾದ ಅಗತ್ಯವಿದೆ. ಅದಕ್ಕೆ ಅಗತ್ಯವಾದ ಅನುದಾನವನ್ನು ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜನೆ ಮಾಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಾಹಿತ್ಯ ಪರಿಸ್ಥಿತಿ ಸೋಷಿಯಲ್ ಮೀಡಿಯಾಗಳ ಭರಾಟೆಯಲ್ಲಿ ಕಳೆದು ಹೋಗಿದೆ. ಇ-ಬುಕ್, ಆಡಿಯೋ ಬುಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕ ಪ್ರಕಟಣೆಯ ಜೊತೆಗೆ ಈ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆಯಬೇಕಿದೆ. ಇದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುವ ಬರಹಗಾರರು ತಮ್ಮ ಸುತ್ತಲಿನ ಪರಿಸರವನ್ನು ಗ್ರಹಿಸಿ ಬರೆಯಬೇಕು. ಸಾಹಿತ್ಯ ಪರಂಪರೆಯನ್ನು ಅರಿತು ಬರೆಯಬೇಕು. ಬರವಣಿಗೆಗೂ ಮೊದಲು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಅವರು ಯುವ ಲೇಖಕರಿಗೆ ಕಿವಿಮಾತು ಹೇಳಿದ್ದಾರೆ.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಜಾತಿ, ವರ್ಗಗಳನ್ನು ಮೀರಿದ ಸಾಹಿತ್ಯ ಸೃಷ್ಟಿ ನಮ್ಮ ಧ್ಯೇಯ ಆಗಬೇಕು. ಶೋಷಿತರು ಎಲ್ಲಾ ಜಾತಿಯ ಎಲ್ಲಾ ವರ್ಗಗಳಲ್ಲಿಯೂ ಇರುತ್ತಾರೆ. ಬರಹಗಾರರು ಜಾತಿ ವರ್ಗಗಳನ್ನು ಮೀರಿ ಶೋಷಣೆಯ ವಿರುದ್ಧ ದನಿ ಎತ್ತಬೇಕು ಎಂದು ತಿಳಿಸಿದ್ದಾರೆ.

ಇಂದಿನ ಯುವ ಬರಹಗಾರರು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಂಪರೆ ಪ್ರವಾಹ ಇದ್ದ ಹಾಗೆ. ಅದನ್ನು ಅರಿತು, ಗ್ರಹಿಸಿ, ಅಧ್ಯಯನ ಮಾಡಿ ಬರೆದರೆ ಶಕ್ತಿಯುತ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಸಾಹಿತ್ಯದ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಂಡಿದೆ. ಅದನ್ನು ಒಂದು ವರ್ಷದೊಳಗೆ ಮುಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಅವುಗಳನ್ನು ಇ ಬುಕ್ ಆಗಿ ಕೂಡ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಸೌಭಾಗ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News