ಶಿವಮೊಗ್ಗದಲ್ಲಿ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು

Update: 2021-02-19 17:27 GMT

ಶಿವಮೊಗ್ಗ, ಫೆ.19: ಶಿವಮೊಗ್ಗ ಪೊಲೀಸರ ಬಂದೂಕು ಮತ್ತೆ ಸದ್ದು ಮಾಡಿದ್ದು, ರೌಡಿ ಶೀಟರ್ ಒಬ್ಬನ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡಿರುವ ರೌಡಿ ಶೀಟರ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ರೌಡಿ ಶೀಟರ್ ದೀಪು ಅಲಿಯಾಸ್ ಡಿಂಗನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣವೊಂದರ ಸಂಬಂಧ ರೌಡಿ ಶೀಟರ್ ದೀಪುನನ್ನು ಬಂಧಿಸಲು ತೆರಳಿದಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಫೈರಿಂಗ್ ಮಾಡಲಾಗಿದೆ. 

ಏನಿದು ಘಟನೆ ?: ಅನುಪಿನಕಟ್ಟೆಯಲ್ಲಿ ರೌಡಿ ಶೀಟರ್ ದೀಪು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿಗಳು ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಹೆಡ್ ಕಾನ್ಸ್ ಟೇಬಲ್ ಅರುಣ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಹಾಗಾಗಿ ಶರಣಾಗುವಂತೆ ಇನ್ಸ್ ಪೆಕ್ಟರ್ ದೀಪಕ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದಕ್ಕೆ ಮನ್ನಣೆ ಕೊಡದೇ ಪರಾರಿ ಆಗಲು ಯತ್ನಿಸಿದಾಗ ರೌಡಿ ಶೀಟರ್ ದೀಪು ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. 

ಯಾರಿದು ದೀಪು ಅಲಿಯಾಸ್ ಡಿಂಗ ?

ರೌಡಿ ಶೀಟರ್ ದೀಪು ಅಲಿಯಾಸ್ ಡಿಂಗ, ಕುಖ್ಯಾತ ರೌಡಿ ಬಚ್ಚನ್ ಗ್ಯಾಂಗ್ ಸದಸ್ಯ. ಹಣಕ್ಕಾಗಿ ಇತ್ತೀಚೆಗೆ ಗ್ಯಾಂಗ್ ಕಟ್ಟಿಕೊಂಡು ಹೋಗಿ, ಟಿಪ್ಪು ನಗರದ ವ್ಯಾಪಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ, ಸಹೋದರರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ರೌಡಿ ಶೀಟರ್ ದೀಪುನನ್ನು ಬಂಧಿಸಲು ತುಂಗಾ ನಗರ ಠಾಣೆ ಪೊಲೀಸರು ತೆರಳಿದ್ದರು. 

ರೌಡಿ ಶೀಟರ್ ದೀಪು ಈ ಹಿಂದೆ ರೌಡಿ ಶೀಟರ್ ಲೋಕಿ ಜೊತೆ ಗುರುತಿಸಿಕೊಂಡಿದ್ದ. ಮೆಂಟಲ್ ಸೀನ, ಮೋಟಿ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. 

ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಪ್ರಶಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಾಯಗೊಂಡಿರುವ ಹೆಡ್ ಕಾನ್ಸ್ ಟೇಬಲ್ ಅರುಣ್ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News