ರೈತರ ಸಮಸ್ಯೆಗಳಿಗೆ ಆಳುವ ಸರಕಾರಗಳು ಕಿವಿಗೊಡುತ್ತಿಲ್ಲ: ಸಮ್ಮೇಳನಾಧ್ಯಕ್ಷೆ ಮೀರಾ ಶಿವಲಿಂಗಯ್ಯ

Update: 2021-02-19 18:03 GMT

ಮಂಡ್ಯ, ಫೆ.19: ರೈತರು ಬವಣೆಗೆ ಒಳಗಾಗುತ್ತಿದ್ದಾರೆ. ಬೇಸಾಯ ದುಸ್ಥಿತಿಯ ಹಾದಿಯಲ್ಲಿದೆ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಯಾವುದೇ ಪ್ರತಿಭಟನೆ, ಚಳುವಳಿ, ವಿರೋಧ ವ್ಯಕ್ತವಾದರೂ ಆಳುವ ಸರಕಾರಗಳು ಕಿವಿಗೊಡುತ್ತಿಲ್ಲ ಎಂದು ಮಂಡ್ಯ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಅವರು, ಸರಕಾರ ಸಮಸ್ಯೆಗೆ ಕಿವಿಗೊಡ ಹಿನ್ನೆಲೆಯಲ್ಲಿ ಕೊನೆಗೆ ಆತ್ಮಹತ್ಯೆಯೇ ಪರಿಹಾರ ಎಂದು ರೈತರು ಕಂಡುಕೊಂಡಿದ್ದಾರೆ. ಈ ದೆಸೆಯಲ್ಲಿ ವಿಜ್ಞಾನಿಗಳು, ಜನಪ್ರತಿನಿಧಿಗಳು ಅನ್ನವಿಲ್ಲದಿದ್ದರೆ ಬದುಕಿಲ್ಲ ಎಂಬುದನ್ನು ಮನಗಂಡು ನ್ಯಾಯ ಒದಗಿಸಬೇಕಾಗಿದೆ ಎಂದರು.

ಯಾವ ಜಿಲ್ಲೆ ಸಿರಿ ಸಂಪತ್ತಿನಿಂದ ಉತ್ತಮ ಸಂಸ್ಕೃತಿ ಸಂಪನ್ನತೆಯಿಂದ ಬೆಳಗಬೇಕಾಗಿತ್ತೋ ಆ ಜಿಲ್ಲೆಯಲ್ಲಿ ಇಂದು ನಾವು ಹಿಂದಿನ ವೈಭವವನ್ನು ಸ್ಮರಿಸುವಂತಾಗಿದೆಯೇನೋ ಅನ್ನಿಸುತ್ತಿದೆ. ನಮ್ಮ ನೆರೆ-ಹೊರೆಯ ಜಿಲ್ಲೆಗಳಂತೆ ಪ್ರಗತಿಯ ಹೆಜ್ಜೆ ಮೂಡಿಸುವಲ್ಲಿ ಮಂಡ್ಯ ಜಿಲ್ಲೆಗೆ ನಿರೀಕ್ಷಿತ ಫಲ ದೊರೆತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ಕೃಷಿ ಸಂಸ್ಕೃತಿ ಉನ್ನತ ಮಟ್ಟದಲ್ಲಿದೆ. ಕೋವಿಡ್ ದಾಳಿಯಿಂದ ರೈತರು ಕಷ್ಟಕಾರ್ಪಣ್ಯ ಅನುಭವಿಸಿದರೂ ಬಹಳ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ತಯಾರಾಗುವ ನೈಸರ್ಗಿಕ ಬೆಲ್ಲ ಹಲವಾರು ಬಾರಿ ವಿದೇಶಕ್ಕೂ ರಫ್ತಾಗಿದೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಒಂದು ಬೆಳೆ ಒಂದು ಜಿಲ್ಲೆ’ ಯೋಜನೆ ಅಡಿಯಲ್ಲಿ ಮಂಡ್ಯಕ್ಕೆ 'ಬೆಲ್ಲದ' ಉತ್ಪಾದನೆಯ ಏಕ ಸ್ವಾಮ್ಯತೆ ಕೊಟ್ಟು ತಾಂತ್ರಿಕವಾಗಿ ಸುಧಾರಿತ ಆಲೆಮನೆ ಸ್ಥಾಪನೆ ಮಾಡಿಕೊಳ್ಳುವಲ್ಲಿ ಸರಕಾರ ಸಹಕಾರ ನೀಡಲು ಮನಸ್ಸು ಮಾಡಿದೆ ಎಂದು ಅವರು ತಿಳಿಸಿದರು.

ಮಂಡ್ಯದ ವಿದ್ಯಾವಂತ ಯುವಕರು ದೇಶ ವಿದೇಶಗಳಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಕೀಲಾರದ ಇಂಜಿನಿಯರ್ ಬಾಬುರವರು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮರು ನಿರ್ಮಾಣ ಮಾಡಿದ ಸಮಿತಿಯ ಪ್ರಮುಖರಲ್ಲೊಬ್ಬರು. ಹಲ್ಲೇಗೆರೆಯ ಡಾ.ವಿವೇಕಮೂರ್ತಿ ಅಮೆರಿಕದ ಅಧ್ಯಕ್ಷರ ಆಪ್ತ ವರ್ಗದಲ್ಲಿದ್ದಾರೆ ಎಂದು ಅವರು ಹೇಳಿದರು.

ಸಾಮಾನ್ಯ ಜನರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅವಶ್ಯಕವಿರುವ ಉತ್ತಮ ಸಾಹಿತ್ಯವನ್ನು ಸೃಷ್ಟಿ ಮಾಡುವ ದಿಕ್ಕಿನಲ್ಲಿ ಸಾಹಿತ್ಯ ಪರಿಷತ್ತು ಕೆಲಸ ಮಾಡಬೇಕಿದೆ. ಪರಿಷತ್ತು ಯುವಕರಿಗೆ ಮತ್ತು ಮಕ್ಕಳಿಗೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಭಾಷೆಯ ವಿಷಯದಲ್ಲಿ ನಿರಭಿಮಾನ ಅಥವಾ ದುರಭಿಮಾನ ಇರಬಾರದು, ಬದಲಿಗೆ ಸದಭಿಮಾನವಿರಬೇಕು. ಇತರ ಭಾಷೆಗಳ ಬಗ್ಗೆ ದ್ವೇಷ, ಅಸೂಯೆ, ಪೂರ್ವಗ್ರಹ, ತುಚ್ಛಭಾವ ಸಲ್ಲದು. ಹಿಂದಿಯನ್ನು ಕಲಿಯೋಣ, ಆದರೆ ಅದೊಂದೇ ಇಡೀ ಭಾರತದ ರಾಷ್ಟ್ರಭಾಷೆ ಎಂಬ ದುರಹಂಕಾರವನ್ನು ಮಾತ್ರ ಮೆಟ್ಟಿ ನಿಲ್ಲೋಣ ಎಂದು ಅವರು ಕರೆ ನೀಡಿದರು.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಉತ್ತಮವಾಗಿ ನಡೆಯಬೇಕಾದರೆ ಶಾಲೆಗೆ ಪೂರಕವಾದ ಎಲ್ಲ ಸೌಕರ್ಯ ಸೌಲಭ್ಯಗಳು ಇರಬೇಕು. ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಮಾಡಿರುವ ಮಕ್ಕಳಿಗೆ ಮಾತ್ರವೇ ಸರಕಾರದ ಉದ್ಯೋಗಕ್ಕೆ ಪ್ರಾಶಸ್ತ್ಯ ಕೊಡಲಾಗುವುದು ಎಂಬ ನಿಯಮ ತಂದರೆ ಆಗ ಬಹುಃಶ ಕನ್ನಡ ಕೂಡ ಅನ್ನದ ಭಾಷೆ ಎನಿಸಿಕೊಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕನ್ನಡಿಗರ ಉದ್ಯೋಗವನ್ನು ಕುರಿತು ಇರುವಂತಹ ಸರೋಜಿನಿ ಮಹಿಷಿ ವರದಿಯನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಜಾರಿಗೆ ತರಬೇಕು. ಗಡಿ ಭಾಗದ ಊರುಗಳಲ್ಲಿ ಕನ್ನಡವನ್ನು ಸಾಂಸ್ಕೃತಿಕ ಭಾಷೆಯನ್ನಾಗಿ ಶಿಕ್ಷಣದ ಭಾಷೆಯನ್ನಾಗಿ ಉಳಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಸಮಾಜದಲ್ಲಿ ಇಂದಿಗೂ ಜಾತೀಯತೆ, ಅಸ್ಪೃಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ, ಮಾರ್ಯದೆ ಹತ್ಯೆಗಳು ಜೀವಂತವಾಗಿವೆ. ಇವುಗಳ ನಿವಾರಣೆಯಾಗಬೇಕು. ಮರ್ಯಾದೆ ಹತ್ಯೆಗಿಂತ ಅನಾಗರಿಕವಾದ ಕೃತ್ಯ, ನಡವಳಿಕೆ ಮತ್ತೊಂದಿಲ್ಲ. ಸರಕಾರ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಡಾ.ಅಶ್ವಥನಾರಾಯಣ
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ, ರಾಜ್ಯದಲ್ಲಿ ನಿರುದ್ಯೋಗ ಮಟ್ಟವನ್ನು ಕಡಿಮೆ ಮಾಡಲು ಅತಿ ಶೀಘ್ರದಲ್ಲೇ 1 ಕೋಟಿ ಉದ್ಯೋಗವನ್ನು ಸೃಷ್ಟಿಸಲಾಗುವುದು ಎಂದರು.

ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತರ ಬೆಳೆಗಳಿಗೆ ಉತ್ತಮವಾದ ಬೆಲೆ ದೊರಕಿ ಅವರ ಆದಾಯದಲ್ಲಿ ಹೆಚ್ಚಳವಾಗಬೇಕು ಮತ್ತು ಅವರನ್ನು ಆರ್ಥಿಕವಾಗಿ ಸಬಲರಾಗಲು ಬೇಕಾಗುವಂತಹ ಸೌಕರ್ಯಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.

ಮಂಡ್ಯ ಜಿಲ್ಲೆಯಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವ ರೈತಾಪಿ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿದೆ. ವ್ಯವಸಾಯ ಕಾರ್ಯಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಇಸ್ರೇಲ್ ಮಾದರಿಯಲ್ಲಿ ಕೃಷಿಯನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಸಾಹಿತ್ಯಕ್ಕೆ, ಕನ್ನಡ ನಾಡು ನುಡಿಗೆ ಮಂಡ್ಯದ ಸಾಹಿತಿಗಳ, ಕಲಾವಿದರ ಕೊಡುಗೆ ಅಪಾರ. ನಮ್ಮತನವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯ. ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಈ ವರ್ಷದಿಂದ ಜಾರಿಯಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಮಂಡ್ಯ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ರಂಗ, ರಾಜಕೀಯ, ಕಲೆ, ಸಿನಿಮಾ ಎಲ್ಲಾ ರಂಗದಲ್ಲೂ ಹೆಸರುವಾಸಿ ಪಡೆದಿದೆ. ಕೊರೋನದಿಂದ ಉದ್ಯೋಗ ಕಳೆದುಕೊಂಡಿರುವವರಿಗೆ ಪ್ರತಿ ಗ್ರಾಮದಲ್ಲಿ ತರಬೇತಿ ಕೊಟ್ಟು ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಡಾ.ಕೆ.ಅನ್ನದಾನಿ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ಜುಲ್ಫಿಕರ್ ಉಲ್ಲಾ, ಅಪರ ಜಿಲ್ಲಾಧಿಕಾರಿ ಶೈಲಜಾ, ಇತರ ಗಣ್ಯರು ಉಪಸ್ಥಿತರಿದ್ದರು.

“ಮಂಡ್ಯ ಜಿಲ್ಲೆಯು ನಾಡಿನ ಸಾಮಾಜಿಕ, ರಾಜಕೀಯ, ಸಾಸ್ಕೃತಿಕ, ಸಾಹಿತ್ಯಕ ಕ್ಷೇತ್ರಗಳಿಗೆ ಸಲ್ಲಿಸಿದ ಕೊಡುಗೆ ಅಪಾರವಾದುದು. ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ದಾಪುಗಾಲಿಡುತ್ತಿದ್ದಾಳೆ. ಇಲ್ಲಿನ ಪುರುಷ ಸಾಹಿತಿಗಳಂತೆಯೆ ಪ್ರತಿಭಾವಂತ ಮಹಿಳೆಯರು ಸಹ ನಾಡುನುಡಿಯ ಗುಡಿಯನ್ನು ಕಟ್ಟುವ ಪವಿತ್ರ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ”
-ಮೀರಾ ಶಿವಲಿಂಗಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News