ಭಾರತ ಸ್ವಾವಲಂಬಿಯಾಗಲು ಸರಕಾರಗಳು ಖಾಸಗಿ ವಲಯವನ್ನು ಬೆಂಬಲಿಸಬೇಕು: ಪ್ರಧಾನಿ ಮೋದಿ

Update: 2021-02-20 18:54 GMT

ಸರಕಾರದ ಕೃಷಿ ನೀತಿಗಳು ಆಮದು ವೆಚ್ಚವನ್ನು ತಗ್ಗಿಸಲಿವೆ:ಪ್ರಧಾನಿ ಮೋದಿ

ಹೊಸದಿಲ್ಲಿ,ಫೆ.20: ಸರಕಾರದ ನೀತಿಗಳು ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಆಮದು ವೆಚ್ಚಗಳನ್ನು ತಗ್ಗಿಸುವ ಉದ್ದೇಶವನ್ನು ಹೊಂದಿವೆ ಎಂದು ಶನಿವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ಕೊರೋನವೈರಸ್ ಸಾಂಕ್ರಾಮಿಕದ ನಡುವೆಯೂ ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ದಾಖಲಿಸಿರುವುದಕ್ಕೆ ಕೃಷಿ,ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕುರಿತು ಕೇಂದ್ರದ ಸಮಗ್ರತಾ ದೃಷ್ಟಿಯ ನಿಲುವು ಕಾರಣ ಎಂದರು.

ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ದೇಶದಲ್ಲಿ ಉದ್ಯಮಗಳ ನಿರ್ವಹಣೆಯನ್ನು ಸುಗಮವಾಗಿಸಲು ಪುರಾತನ ಕಾನೂನುಗಳನ್ನು ರದ್ದುಗೊಳಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯಗಳು ನಿಕಟ ಸಮನ್ವಯದೊಂದಿಗೆ ಕಾರ್ಯಾಚರಿಸಬೇಕಿವೆ ಎಂದ ಮೋದಿ, ದೇಶದ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯಗಳು ಒಂದಾಗಿ ಶ್ರಮಿಸಬೇಕಿವೆ. ಸರಕಾರವು ಆರ್ಥಿಕ ಪ್ರಗತಿಗಾಗಿ ಖಾಸಗಿ ಕ್ಷೇತ್ರವನ್ನು ಗೌರವಿಸಬೇಕು ಮತ್ತು ಅದಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು ಎಂದರು.

ಈ ವರ್ಷದ ಕೇಂದ್ರ ಮುಂಗಡಪತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂದ ಅವರು,ಇದು ದೇಶವು ನಿರ್ಧಾರವೊಂದನ್ನು ಕೈಗೊಂಡಿದೆ ಎನ್ನುವುದನ್ನು ಪ್ರತಿಬಿಂಬಿಸಿದೆ,ವೇಗವಾಗಿ ಮುನ್ನಡೆಯಲು ದೇಶವು ಬಯಸಿದೆ ಮತ್ತು ಅದು ಇನ್ನಷ್ಟು ಸಮಯವನ್ನು ಕಳೆದುಕೊಳ್ಳಲು ಬಯಸಿಲ್ಲ ಎಂದರು.

 ಉತ್ಪಾದನೆಯೊಂದಿಗೆ ತಳುಕು ಹಾಕಿಕೊಂಡಿರುವ ಸರಕಾರದ ಪ್ರೋತ್ಸಾಹಕ ಯೋಜನೆಗಳನ್ನು ಉಲ್ಲೇಖಿಸಿದ ಮೋದಿ,ಇದು ತಯಾರಿಕೆಯನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸಿರುವುದರಿಂದ ರಾಜ್ಯಗಳೂ ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಉಚಿತ ವಿದ್ಯುತ್,ಅನಿಲ ಸಂಪರ್ಕ,ಬ್ಯಾಂಕ್ ಖಾತೆಗಳು ಮತ್ತು ಲಸಿಕೆ ವಿತರಣೆಗಾಗಿ ಕೇಂದ್ರ ಸರಕಾರದ ಮುಂಚೂಣಿಯ ಉಪಕ್ರಮಗಳನ್ನು ಪುನರುಚ್ಚರಿಸಿದ ಅವರು,ಈ ಕ್ರಮಗಳು ಸಮಾಜದ ಬಡವರ್ಗಗಳ ಬದುಕುಗಳಲ್ಲಿ ಬದಲಾವಣೆಗಳನ್ನು ತಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News