ಮನುವಾದಿಗಳ ವಿರುದ್ಧ ಹೋರಾಟ ನಿರಂತರ: ಸತೀಶ್ ಜಾರಕಿಹೊಳಿ

Update: 2021-02-20 14:02 GMT

ಬೆಳಗಾವಿ, ಫೆ.20: ಮನುವಾದಿಗಳು ಭಿತ್ತಿರುವ ಮೂಢನಂಬಿಕೆಯ ವಿರುದ್ಧ ಸದಾ ಜಾಗೃತಿ ಮೂಢಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಅಭಿಮಾನಿಯೊಬ್ಬರ ಹೊಸ ಕಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮನುವಾದಿ ಚಿಂತನೆಗಳಿಗೆ ಸೆಡ್ಡುಹೊಡೆದು ಬದುಕುತ್ತೇವೆಯೇ ವಿನಃ ಯಾವುದೇ ಸಂದರ್ಭದಲ್ಲೂ ಅವರಿಗೆ ಹೆದರಿ ಬದುಕು ನಡೆಸುವವರು ನಾವಲ್ಲವೆಂದು ತಿಳಿಸಿದ್ದಾರೆ.

ಎಲ್ಲ ರೀತಿಯ ಮೂಢನಂಬಿಕೆ, ಕಂದಾಚಾರ, ಅನಾಚಾರಗಳ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗವಾಗಿ ನೂತನ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾರಿನ ಮಾಲಕ ವಿಕ್ರಂ ಕರನಿಂಗ ಮಾತನಾಡಿ, ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮೂಢನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದೇವೆ. ಅದೇ ರೀತಿ ಕಾರಿಗೆ ಚಾಲನೆ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಪ್ರಯತ್ನ ಪಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ನವೀನ ಗಂಗರೆಡ್ಡಿ, ನಾಗರಾಜ ಕರನಿಂಗ, ರಾಜು ನಡಮನಿ, ಪ್ರಶಾಂತ ಬಾಡಕರ, ಶಿವರಾಜ ನೂಲಕರ, ಸಂಜು ಹಲಗೆ, ಬಿ.ಎನ್. ಮುಗಳಿ ಮತ್ತಿತರರಿದ್ದರು.

ಮುಂದಿನ ಸಿಎಂ ಹೈಕಮಾಂಡ್‍ಗೆ ಬಿಟ್ಟದ್ದು

ಮುಂದಿನ ಮುಖ್ಯಮಂತ್ರಿ ನೀವೇ ಎಂದು ನನಗೂ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುತ್ತಾರೆ. ಅಂತೆಯೇ ಶಾಸಕ ಝಮೀರ್ ಅಹ್ಮದ್ ಕೂಡ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ಸಿಕ್ಕಬಳಿಕ ಯಾರು ಮುಖ್ಯಮಂತ್ರಿ ಆಗಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ.

-ಸತೀಶ್ ಜಾರಕಿಹೊಳಿ, ಕೆಪಿಸಿಸಿ, ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News