ಫೆ.22ರಿಂದ ಮಾ.22ರ ವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ: ಸಚಿವ ಡಾ.ಕೆ.ಸುಧಾಕರ್

Update: 2021-02-20 12:41 GMT

ಬೆಂಗಳೂರು, ಫೆ. 20: ಮಕ್ಕಳು ಹಾಗೂ ಗರ್ಭಿಣಿಯರಿಗೆ ಏಳು ರೋಗಗಳು ಬಾರದಂತೆ ತಡೆಯಲು ಮಾರ್ಚ್ 22 ರವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ 13 ಜಿಲ್ಲೆಗಳಲ್ಲಿ ಲಸಿಕೆ ನೀಡಲಾಗುವುದು. ಕೇಂದ್ರ ಸರಕಾರ ಇಂದ್ರಧನುಷ್ 3.0 ಅಭಿಯಾನ ಅನುಷ್ಠಾನಗೊಳಿಸಿದ್ದು, ಫೆ.22ರಿಂದ ಮಾ.22ರವರೆಗೆ ಈ ಅಭಿಯಾನ ನಡೆಸಲಾಗುವುದು. ಈವರೆಗೆ ತಲುಪಲಾಗದ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಈ ಲಸಿಕೆ ನೀಡಲಾಗುತ್ತಿದೆ ಎಂದರು.

ಬಿಜೆಪಿ ಸರಕಾರ 2014ರ ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿಂದ ಈ ಲಸಿಕೆ ಅಭಿಯಾನ ಆರಂಭಿಸಿತ್ತು. ನಂತರ 2017ರ ಅಕ್ಟೋಬರ್ 8ರಂದು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಗೆ ಚಾಲನೆ ನೀಡಲಾಗಿತ್ತು. ಈಗ ಮುಂದಿನ ಭಾಗವಾಗಿ 3.0ಗೆ ಚಾಲನೆ ದೊರೆತಿದೆ. ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿರುವಂತೆಯೇ, ಇಂದ್ರಧನುಷ್ ಏಳು ರೋಗಗಳು ಬಾರದಂತೆ ತಡೆಯುತ್ತದೆ ಎಂದು ಸುಧಾಕರ್ ತಿಳಿಸಿದರು.

ಡಿಫ್ತೀರಿಯಾ, ವೂಫಿಂಗ್ ಕಾಫ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೊಲಿಯೋ, ಮಿಸಲ್ಸ್, ಹೆಪಟೈಟಸ್ ಬಿಗೆ ಇದರಲ್ಲಿ ಲಸಿಕೆ ನೀಡಲಾಗುವುದು. ಬೆಂಗಳೂರು, ಬಿಬಿಎಂಪಿ ವ್ಯಾಪ್ತಿ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಈ ಲಸಿಕೆ ನೀಡಲಾಗುವುದು ಎಂದು ಸುಧಾಕರ್ ಹೇಳಿದರು.

ಈ ಜಿಲ್ಲೆಗಳಲ್ಲಿ ವಲಸಿಗರನ್ನು ಹೊಂದಿದ ಕೊಳಚೆ ಪ್ರದೇಶಗಳು, ಇಟ್ಟಿಗೆ ಸುಡುವ ಜಾಗ, ಅಲೆಮಾರಿಗಳು ವಾಸಿಸುವ ಸ್ಥಳ, ಕಟ್ಟಡ ನಿರ್ಮಾಣ ಸ್ಥಳ ಮೊದಲಾದ ಕಡೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಇಂದ್ರಧನುಷ್ ಅಭಿಯಾನದ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News