ಕಲ್ಲು ಕುಟಿಗರ ಸಹಕಾರ ಸಂಘದ ಕಲ್ಲುಗಣಿಗೆ ಸರಕಾರ ಅನುಮತಿ: 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ

Update: 2021-02-20 13:20 GMT

ಬೆಂಗಳೂರು, ಫೆ.20: ತುಮಕೂರು ಜಿಲ್ಲೆ ಶಿರಾ ತಾಲೂಕು ಮದ್ದಕ್ಕನಹಳ್ಳಿ ಗ್ರಾಮದ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ(ಸರ್ವೆ ನಂ.12 12.20 ಎಕರೆ) ಪ್ರದೇಶದಲ್ಲಿ ಗ್ರೇ ಗ್ರಾನೈಟ್ ಕಲ್ಲುಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ.

ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದ್ದು, ಅವರ ಕುಟುಂಬಕ್ಕೂ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಆಶ್ರಯ ಸಿಗಲಿದೆ. ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು) ಪರಿಗಣಿಸಿ ಹರಾಜು ರಹಿತವಾಗಿ ಮಂಜೂರಾತಿ ಮಾಡಲು ಶುಕ್ರವಾರ ನಡೆದ ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೋಂದಣಿ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಈ ಸಂಘಕ್ಕೆ ಮಾನವೀಯತೆಯ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪ್ರಯತ್ನದಿಂದಾಗಿ ಹರಾಜು ರಹಿತವಾಗಿ ಮಂಜೂರು ಮಾಡಲಾಗಿದೆ.

ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನನೆಗುದಿಗೆ ಬಿದ್ದಿತ್ತು. ಇದರ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿದ ಮುರುಗೇಶ್ ನಿರಾಣಿ, ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆಗೆ ಚರ್ಚೆಸಿ ಈ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News