ಭದ್ರಾ-ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ: ಪ್ರಧಾನಿಗೆ ಸಿಎಂ ಬಿಎಸ್‍ವೈ ಮನವಿ

Update: 2021-02-20 13:40 GMT

ಬೆಂಗಳೂರು, ಫೆ.20: ಉತ್ತರ ಕರ್ನಾಟಕ ಭಾಗದ ಜೀವನಾಡಿಯಾಗಿರುವ ಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಕೇಂದ್ರ ಸರಕಾರವು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ತಮ್ಮ ಗೃಹ ಕಚೇರಿ ಕೃಷ್ಣಾದಿಂದಲೇ ಪಾಲ್ಗೊಂಡಿದ್ದ ಮುಖ್ಯಮಂತ್ರಿ, ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಪ್ರಸ್ತಾಪಿಸುವ ವೇಳೆ ಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಪ್ರಧಾನಿಯ ಗಮನಕ್ಕೆ ತಂದರು.

ಜೊತೆಗೆ ನದಿ ತಿರುವು ಯೋಜನೆಗಳಿಗೆ ಅನುದಾನ ಒದಗಿಸುವಂತೆ ಹಾಗೂ ಕಾಲುವೆಗಳ ಆಧುನೀಕರಣ ಯೋಜನೆಯಡಿ ರಾಜ್ಯದಿಂದ 6,673 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ ಮುಖ್ಯಮಂತ್ರಿ, ಖಾಸಗಿ ಸಹಭಾಗಿತ್ವದಲ್ಲಿ 3 ಬಂದರುಗಳ ಅಭಿವೃದ್ಧಿ, ರೈಲ್ವೆಯೊಂದಿಗೆ ಜಂಟಿ ಪಾಲುದಾರಿಕೆಯಲ್ಲಿ ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ಕಾನೂನು ತೊಡಕುಗಳು ಮತ್ತು ಪರಿಸರ ಹೋರಾಟಗಳ ಹಿನ್ನೆಲೆಯಲ್ಲಿ ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಇಂತಹ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.

ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಕೈಗೊಳ್ಳಬೇಕಾಗಿರುವ ಹಲವು ಉಪಕ್ರಮಗಳಿಗೆ ಕೇಂದ್ರ ಸರಕಾರದ ಆರ್ಥಿಕ ನೆರವು ಒದಗಿಸುವಂತೆ ಪ್ರಧಾನ ಮಂತ್ರಿಗೆ ಮನವಿ ಮಾಡಿದ ಅವರು, ಎಲ್ಲ ಸರಕಾರಿ ಕಚೇರಿಗಳಿಗೆ ಇಂಟರ್‍ನೆಟ್ ಸೌಲಭ್ಯ ಒದಗಿಸಲು ಒಪ್ಟಿಕಲ್ ಫೈಬರ್ ನೆಟ್‍ವರ್ಕ್ ರೂಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕೇಂದ್ರ ಸರಕಾರದಿಂದ 4,300 ಕೋಟಿ ರೂ.ನೆರವು ಒದಗಿಸುವಂತೆ ಕೋರಿದರು.

ಕೋವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002 ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫೀಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಮೊದಲಾದ ಉಪಕ್ರಮಗಳ ಕುರಿತು ವಿವರಿಸಲಾಯಿತು.

ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಕೈಗಾರಿಕೋದ್ಯಮಿಗಳ ಸಹಯೋಗದೊಂದಿಗೆ ತರಬೇತಿ ವ್ಯವಸ್ಥೆಯ ಉನ್ನತೀಕರಣದ ಮೂಲಕ ನೂತನ ತಂತ್ರಜ್ಞಾನ, ಕೌಶಲ್ಯಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನಿರುದ್ಯೋಗ ದೇಶದಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಅಂದರೆ ಸುಮಾರು ಶೇ.3.6 ರಷ್ಟಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತು ಕಾರ್ಯಪಡೆ ರಚಿಸಲಾಗಿದ್ದು, ಪೌಷ್ಟಿಕತೆಯ ಮಟ್ಟ ಹೆಚ್ಚಿಸಲು ಸಿರಿ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆಯಾ ಪ್ರಾದೇಶಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಬೆಳೆಯಲು ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರೊಂದಿಗೆ ಸ್ಥಳೀಯ ಜಾನುವಾರು ತಳಿಗಳನ್ನು ಸಂರಕ್ಷಿಸಲು ಸಹ ಉದ್ದೇಶಿಸಲಾಗಿದೆ. ವೈಜ್ಞಾನಿಕ ಮಾರುಕಟ್ಟೆ ಮಾಹಿತಿ ಕೋಶವನ್ನು ಸ್ಥಾಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಆದಾಯ ಆಧಾರಿತ ಸಿದ್ಧಾಂತದೆಡೆಗೆ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಆತ್ಮನಿರ್ಭರ್ ಯೋಜನೆಯಡಿ ಹೆಚ್ಚುವರಿಯಾಗಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಆನ್ ಲೈನ್ ಮಾರುಕಟ್ಟೆ ಹಾಗೂ ಪೂರಕ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ. ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ 114 ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಹಿಂದುಳಿದ ತಾಲೂಕುಗಳು ಹಾಗೂ ವಲಯಗಳ ಅಭಿವೃದ್ಧಿಗೆ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವು ಪಡೆಯಲು ‘ಆಕಾಂಕ್ಷಾ’ ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ. ಸೇವಾ ಸಿಂಧು ಯೋಜನೆಯಡಿ ಜನತೆಗೆ 750 ಸೇವೆಗಳನ್ನು ಕಾಗದರಹಿತವಾಗಿ ಒದಗಿಸಲಾಗುತ್ತಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ ದಡಿ 3409 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು. ಆಯುಷ್ಮಾನ್ ಭಾರತ್ ಯೋಜನೆಯಡಿ 2753 ಕೋಟಿ ರೂ. ವೆಚ್ಚದಲ್ಲಿ 13 ಲಕ್ಷ ಜನರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ. ರಾಜ್ಯದಲ್ಲಿ 4607 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಆತ್ಮನಿರ್ಭರ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಸೂಪರ್-ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಆಯುಷ್ ಪದ್ಧತಿಗೆ ಉತ್ತೇಜನ ನೀಡುವ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗಿದೆ. ಪೌಷ್ಟಿಕತೆ ಕಡಿಮೆ ಇರುವ ರಾಜ್ಯದ 16 ಜಿಲ್ಲೆಗಳ 67 ತಾಲೂಕುಗಳಲ್ಲಿ ಪೌಷ್ಟಿಕತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ವಲಯದ ಪ್ರಮುಖ ತಾಣವಾಗಿ ರೂಪಿಸುವುದು, ಕೃಷಿ ವಲಯಕ್ಕೆ ಹೊಸ ಸ್ವರೂಪ ನೀಡುವುದು, ಭೌತಿಕ ಮೂಲಸೌಕರ್ಯಗಳ ಸುಧಾರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ದಕ್ಷ ನಾಗರಿಕ ಸೇವಾ ಸೌಲಭ್ಯ ಒದಗಿಸುವುದು, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಧಾನ ಮಂತ್ರಿಯವರು ಈಸ್ ಆಫ್ ಡೂಯಿಂಗ್ ಬಿಸಿನೆಸ್ ಜೊತೆಗೆ ಈಸ್ ಆಫ್ ಲಿವೀಂಗ್‍ಗೂ ಆದ್ಯತೆ ನೀಡುವಂತೆ ಸಭೆಯಲ್ಲಿ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News