ಗುಜರಾತ್‍ನಲ್ಲಿ ವಿಶ್ವದ ಅತ್ಯಂತ ದೊಡ್ಡ ಮೃಗಾಲಯ ಸ್ಥಾಪಿಸಲಿರುವ ಮುಕೇಶ್‌ ಅಂಬಾನಿ

Update: 2021-02-20 16:32 GMT

ಮುಂಬೈ, ಫೆ. 20: ಬಹುತೇಕ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿರುವ ರಿಲಾಯನ್ಸ್ ಇಂಡಸ್ಟ್ರಿ, ಗುಜರಾತ್‌ನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ಆರಂಭಿಸಲು ಯೋಜಿಸುತ್ತಿದೆ. ಈ ಮೃಗಾಲಯದಲ್ಲಿ ಭಾರತದ ಮಾತ್ರವಲ್ಲದೆ, ವಿಶ್ವದ ವಿಭಿನ್ನ ಪ್ರಾಣಿ, ಪಕ್ಷಿ ಹಾಗೂ ಉರಗಗಳ ಪ್ರಭೇದಗಳು ಇರಲಿವೆ.

ರಿಲಾಯನ್ಸ್ ಇಂಡಸ್ಟ್ರಿ ಲಿಮಿಟೆಡ್ (ಆರ್‌ಐಎಲ್) ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆ ಜಾಮ್‌ನಗರದ ಸಮೀಪದ ಮೋತಿ ಖಾವಡ್ಡಿಯಲ್ಲಿರುವ ಕಂಪೆನಿಯ ಸಂಸ್ಕರಣಾ ಯೋಜನೆಯ ಸಮೀಪ 280 ಎಕರೆ ಭೂಮಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಇದಲ್ಲದೆ, ಈ ಮೃಗಾಲಯವು ಸ್ಥಳೀಯ ಸರಕಾರದ ಪ್ರಾಣಿ, ಪಕ್ಷಿ ಸಂರಕ್ಷಣಾ ಕೇಂದ್ರವನ್ನು ಕೂಡ ಒಳಗೊಳ್ಳಲಿದ್ದು, 2023ರ ಹೊತ್ತಿಗೆ ಆರಂಭವಾಗಲಿದೆ ಎಂದು ರಿಲಾಯನ್ಸ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರಿಮಲ್ ನತ್ವಾನಿ ಅವರನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಈ ಮೃಗಾಲಯವನ್ನು ‘ಹಸಿರು ಪ್ರಾಣಿಶಾಸ್ತ್ರೀಯ ರಕ್ಷಣೆ ಹಾಗೂ ಪುನರ್ವಸತಿ ಸಾಮ್ರಾಜ್ಯ’ ಎಂದು ಕರೆಯಲಾಗುವುದು ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿ ಹೇಳಿದೆ. ಕಪ್ಪೆಗಳ ಮನೆ, ಡ್ರಾಗನ್‌ಗಳ ಭೂಮಿ, ಕೀಟ ಸಂಗ್ರಹಾಲಯ, ದಂಶಕಗಳ ಭೂಮಿ, ಜಲವಾಸಿಗಳ ಸಾಮ್ರಾಜ್ಯ, ಭಾರತದ ಅರಣ್ಯ, ಪಶ್ಚಿಮಕರಾವಳಿಯ ಜವುಗು, ಭಾರತದ ಮರುಭೂಮಿ, ವಿಲಕ್ಷಣ ದ್ವೀಪ ಎಂಬ ಹೆಸರಿನ ವಿಭಾಗದಲ್ಲಿ ಜಗತ್ತಿನಾದ್ಯಂತದ ಹಕ್ಕಿಗಳು ಹಾಗೂ ಪ್ರಾಣಿಗಳು ಈ ಮೃಗಾಲಯ ಒಳಗೊಂಡಿರಲಿದೆ ಎಂದು ವರದಿ ಹೇಳಿದೆ. ಆಫ್ರಿಕಾದ ಸಿಂಹ, ಚೀತಾ, ಜಾಗ್ವಾರ್, ಭಾರತದ ತೋಳ, ಏಷ್ಯಾದ ಸಿಂಹ, ಪಿಗ್ಮಿ ಹಿಪ್ಪೋ, ಒರಾಂಗುಟನ್, ಲೆಮುರ್, ಮೀನು ಹಿಡಿಯುವ ಬೆಕ್ಕು, ಸ್ಲೋತ್ ಕರಡಿ, ಬೆಂಗಾಳ ಹುಲಿ, ಗೊರಿಲ್ಲಾ, ಝೀಬ್ರಾ, ಜಿರಾಫೆ, ಆಫ್ರಿಕಾದ ಆನೆ ಹಾಗೂ ಕೊಮೊಡೊ ಡ್ರಾಗನ್‌ಗಳು ಈ ಮೃಗಾಲಯದ ಭಾಗವಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News