ಬಿಎಸ್‍ವೈ ಕುಟುಂಬದ ಬಗ್ಗೆ ಯತ್ನಾಳ್ ಆರೋಪದ ಕುರಿತು ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ...

Update: 2021-02-20 14:07 GMT

ಕೊಪ್ಪಳ, ಫೆ. 20: ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಅವರು ನನ್ನ ಕುರಿತು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ನಾನು ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಕುಟುಂಬದ ಬಗ್ಗೆ ಯತ್ನಾಳ್ ವರಿಷ್ಠರಿಗೆ ಪತ್ರ ಬರೆದಿದ್ದರೆ ಒಳ್ಳೆಯದು. ಹೈಕಮಾಂಡ್ ಅದನ್ನು ನೋಡಿಕೊಳ್ಳುತ್ತದೆ. ಅದಕ್ಕೂ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ವಿರೋಧವಿಲ್ಲ: ಲಿಂಗಾಯತ ಪಂಚಮಸಾಲಿ ಸೇರಿದಂತೆ ಯಾವುದೇ ಸಮುದಾಯದ ಮೀಸಲಾತಿಗೆ ವಿಚಾರವಾಗಿ ಸಿಎಂ ಮತ್ತು ಬಿಜೆಪಿ ನಾಯಕರು ವಿರೋಧಿಸಿಲ್ಲ. ಕಾನೂನಾತ್ಮಕವಾಗಿ ಏನು ಪರಿಹಾರ ಕೊಡಬೇಕೆಂಬುದನ್ನು ಮುಖ್ಯಮಂತ್ರಿ ತೀರ್ಮಾನ ಮಾಡಲಿದ್ದಾರೆ ಎಂದರು.

ಉತ್ತರಿಸಲಾರೆ: ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವಿದ್ಯಾವಂತರು ಪ್ರತಿಕ್ರಿಯೆ ನೀಡಿದ್ದರೆ ಉತ್ತರ ನೀಡಬಹುದಿತ್ತು. ಆದರೆ, ವಿದ್ಯಾವಂತರಾಗಿರುವ ಮತ್ತು ಎಲ್ಲ ವಿಚಾರ ತಿಳಿದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೀಗೇ ಮಾತನಾಡಿದರೆ ಏನು ಹೇಳಬೇಕು ಎಂದು ವಿಜಯೇಂದ್ರ ಪ್ರಶ್ನಿಸಿದರು.

ಮಂದಿರ ನಿರ್ಮಾಣದ ವಿಷಯದಲ್ಲಿ ರಾಜಕೀಯವನ್ನು ಮಾಡಿ ಮತದಾರರನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಿದ್ದರಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂತಹ ದುಸ್ಥಿತಿ ಬಂದಿದೆ ಎಂದು ವಿಜಯೇಂದ್ರ ಟೀಕಿಸಿದರು. ಇದೇ ವೇಳೆ ಜಿಲ್ಲೆಯ ಹುಲಗಿಯಲ್ಲಿರುವ ಇತಿಹಾಸ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆದರು.

ಅವರು ಇನ್ನೂ ಹೊರಬಂದಿಲ್ಲ: ರಾಜ್ಯ ಸರಕಾರ ಮತ್ತು ಆಡಳಿತದ ವ್ಯವ್ಯಸ್ಥೆ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಕಾಂಗ್ರೆಸ್ ಮಾನಸಿಕತೆಯಿಂದ ಹೊರ ಬಂದಿಲ್ಲವೆಂದು ಕಾಣುತ್ತದೆ. ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯೇ ಅವರಿಗೆ ಇದ್ದಂತಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.

ವಿಶ್ವನಾಥ್ ಅವರು ಮೈಸೂರು ಬಿಟ್ಟು ರಾಜ್ಯದ ವಿವಿಧೆಡೆಗಳಲ್ಲಿ ಪ್ರವಾಸ ಮಾಡಿದರೆ ಅಭಿವೃದ್ಧಿ ಹೇಗೆ ಆಗುತ್ತಿದೆ ಎಂಬ ಮಾಹಿತಿ ಸಿಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಶ್ರಮದಿಂದ ಬಿಜೆಪಿ ಸರಕಾರ ರಚನೆಯಾಗಿದೆ. ಇರುವ ಇತಿಮಿತಿಯಲ್ಲಿ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News