ತೈಲ ಬೆಲೆಯೇರಿಕೆ: ಕೇಂದ್ರದ ವಿರುದ್ಧ ರಾಜಸ್ಥಾನ ಸಿಎಂ ತೀವ್ರ ವಾಗ್ದಾಳಿ

Update: 2021-02-20 15:52 GMT

ಜೈಪುರ, ಫೆ.20: ಕೇಂದ್ರದ ತಪ್ಪು ಆರ್ಥಿಕ ನೀತಿಯಿಂದಾಗಿ ತೈಲ ಬೆಲೆ ಕಳೆದ 11 ದಿನದಿಂದ ನಿರಂತರ ಹೆಚ್ಚಳವಾಗುತ್ತಿದ್ದು ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕೇಂದ್ರದ ಮೋದಿ ಸರಕಾರ ಪೆಟ್ರೋಲ್ ಮೇಲೆ 32.90 ರೂ. ಮತ್ತು ಡೀಸೆಲ್ ಮೇಲೆ 31.80 ರೂ. ಅಬಕಾರಿ ತೆರಿಗೆ ವಿಧಿಸುತ್ತಿದೆ. ಆದರೆ 2014ರಲ್ಲಿ ಯುಪಿಎ ಸರಕಾರವಿದ್ದಾಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಈಗ ಇರುವುದಕ್ಕಿಂತ ದುಪ್ಪಟ್ಟು ಇದ್ದರೂ ಪೆಟ್ರೋಲ್ ಮೇಲೆ 9.20 ರೂ. ಮತ್ತು ಡೀಸೆಲ್ ಮೇಲೆ ಕೇವಲ 3.46 ರೂ. ಅಬಕಾರಿ ತೆರಿಗೆ ವಿಧಿಸಲಾಗಿದೆ.

ಜನತೆಯ ಹಿತದೃಷ್ಟಿಯಿಂದ ಮೋದಿ ಸರಕಾರ ತಕ್ಷಣ ತೈಲಗಳ ಮೇಲಿನ ಅಬಕಾರಿ ತೆರಿಗೆಯನ್ನು ಇಳಿಸಬೇಕು ಎಂದವರು ಆಗ್ರಹಿಸಿದ್ದಾರೆ. ರಾಜ್ಯಗಳಿಗೆ ಸಲ್ಲಬೇಕಿರುವ ಮೂಲ ಅಬಕಾರಿ ತೆರಿಗೆಯ ಅಂಶವನ್ನು ಕೇಂದ್ರ ಸರಕಾರ ನಿರಂತರ ಕಡಿಮೆಗೊಳಿಸಿದ್ದು, ತನ್ನ ಖಜಾನೆ ಭರ್ತಿ ಮಾಡಲು ಹೆಚ್ಚುವರಿ ಅಬಕಾರಿ ತೆರಿಗೆ ಮತ್ತು ವಿಶೇಷ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದೆ. ಆದ್ದರಿಂದ ರಾಜ್ಯಗಳು ತಮ್ಮ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ವ್ಯಾಟ್(ಮೌಲ್ಯವರ್ಧಿತ ತೆರಿಗೆ) ಹೆಚ್ಚಿಸಲೇ ಬೇಕಾಗಿದೆ. ಕೊರೋನದಿಂದ ರಾಜ್ಯದ ಆದಾಯ ಗಣನೀಯವಾಗಿ ಕುಸಿದಿದ್ದರೂ ರಾಜ್ಯಸರಕಾರ ವ್ಯಾಟ್‌ನಲ್ಲಿ 2% ಕಡಿತಗೊಳಿಸಿ ಜನತೆಗೆ ನೆರವಾಗಿದೆ.

ಆದರೆ ಮೋದಿ ಸರಕಾರ ಹೀಗೆ ಮಾಡುವ ಬದಲು, ಪ್ರತೀ ದಿನ ತೈಲ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ ಎಂದು ಗೆಹ್ಲೋಟ್ ಟೀಕಿಸಿದರು. ರಾಜಸ್ತಾನ ಸರಕಾರ ಪೆಟ್ರೋಲ್ ಮೇಲೆ ಅತ್ಯಧಿಕ ತೆರಿಗೆ ವಿಧಿಸಿರುವುದರಿಂದ ಇಲ್ಲಿ ತೈಲ ಬೆಲೆ ಹೆಚ್ಚು ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ರಾಜಸ್ತಾನಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News