ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ: ನ್ಯಾ.ಎಚ್.ನಾಗಮೋಹನದಾಸ್

Update: 2021-02-20 16:24 GMT

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದಡಿ ಮಂಜೂರಾದ 60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದ್ದರೆ, ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ಸಮುದಾಯದ ಎಷ್ಟೋ ಜನರಿಗೆ ಉದ್ಯೋಗ ಕಲ್ಪಿಸದಂತಾಗುತ್ತಿತ್ತು. ಅದರೆ, ಇದುವರೆಗೂ ತುಂಬಿಸಿಲ್ಲ. ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಹೈಕೋರ್ಟ್ ನ ವಿಶ್ರಾಂತ ನ್ಯಾ.ಎಚ್.ನಾಗಮೋಹನದಾಸ್ ಅಸಮಾಧಾನ ವ್ಯಕ್ತಪಡಿಸಿದರು. 

ಇಲ್ಲಿನ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಶನಿವಾರ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ‘ಸಾಮಾಜಿಕ ನ್ಯಾಯ’ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ 2.64 ಲಕ್ಷ ಮಂಜೂರಾದ ಹುದ್ದೆ ಖಾಲಿಯಾಗಿದ್ದರೂ ರಾಜ್ಯ ಸರ್ಕಾರ  ಹುದ್ದೆ ಭರ್ತಿ ಮಾಡಿಲ್ಲ. 1992ರಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಯಿತು. ನೂರಾರು ಸಾರ್ವಜನಿಕ ಉದ್ದಿಮೆಗಳು ಖಾಸಗೀಕರಣವಾದವು. ಇದರ ಪರಿಣಾಮ ಲಭ್ಯವಾಗುತ್ತಿದ್ದ ಉದ್ಯೋಗಗಳು ದಿನೇ ದಿನೇ ಕಡಿಮೆಯಾಗುತ್ತಿವೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊರ ಗುತ್ತಿಗೆ ಪದ್ಧತಿ ಜಾರಿಗೆ ಬಂದು ಉದ್ಯೋಗಕ್ಕೆ ಭದ್ರತೆ ಇಲ್ಲದಂತಾಯಿತು ಎಂದರು. 

ದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಸಾಧಿಸಿದರೂ ಕೂಡ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಸಾಮಾಜಿಕ ವ್ಯವಸ್ಥೆ ಕುಸಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಿನ್ನ ನೀತಿಗಳನ್ನು ಅನುಸರಿಸುವುದರಿಂದ ಅನೇಕ ರೀತಿಯ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲೂ ಅಂಬಾನಿಯಂಥ ಉದ್ಯಮಿಗಳು ಕೋಟ್ಯಂತರ ರೂ. ಲಾಭ ಗಳಿಸುತ್ತಿದ್ದಾರೆ. ಅವರ ಒಂದು ಗಂಟೆ ವರಮಾನಕ್ಕೆ ನಾವು 90 ಜನ್ಮ ಎತ್ತಬೇಕಾಗಿದೆ ಎಂದರು.

ಅನೇಕ ಜನರು ಸಾಮಾಜಿಕ ನ್ಯಾಯ ಎಂದರೆ ಬಹುಪಾಲು ಅರ್ಥ ಮಾಡಿಕೊಂಡಿರುವುದು ಮೀಸಲಾತಿ. ಮೀಸಲಾತಿ ಅಂದರೆ ಸಾಮಾಜಿಕ ನ್ಯಾಯ. ಸಾಮಾಜಿಕ ನ್ಯಾಯ ಎಂದರೆ ಮೀಸಲಾತಿ. ಅದನ್ನು ಪುನರ್ ರಚಿಸಲು ಹೋಗಲಿಲ್ಲ. ಮೀಸಲಾತಿ ಬೇಡ ಎಂದು ನಾನು ಹೇಳುವುದಿಲ್ಲ. ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಸಣ್ಣ ಭಾಗವಾಗಿದೆ ಎಂದರು.

ದೇಶದಲ್ಲಿ ರೈತರು ಆರ್ಥಿಕವಾಗಿ, ನೈತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ. ಕಳೆದ 20 ವರ್ಷದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ನೊಂದ ರೈತರಿಗೆ ನೆರವಾಗಿ ನಮ್ಮ ಹಕ್ಕನ್ನು ಸಾಮಾಜಿಕ ನ್ಯಾಯದಡಿ ಹಕ್ಕು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ಇಂದು ಉದ್ಯಮಗಳಿಗೆ ಭದ್ರತೆ ಇಲ್ಲ, ಕೂಲಿಗೆ ಭದ್ರತೆ ಇಲ್ಲ, ಸಾಮಾಜಿಕ ಭದ್ರತೆ ಇಲ್ಲ. ದೇಶದಲ್ಲಿ ದಿನೇ ದಿನೇ ಜಾತಿ ಪ್ರಭಾವ, ಹಣದ ಪ್ರಭಾವ ಹೆಚ್ಚಾಗಿ, ದಲಿತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ತೈಲ ಬೆಲೆ ಏರಿಕೆಯಿಂದ ಜನಜೀವನ ಬದುಕು ದುಬಾರಿಯಾಗಿದೆ. ಇಂತಹ ವ್ಯವಸ್ಥೆ ವಿರುದ್ಧ ಯಾರಾದರೂ ಧ್ವನಿ ಎತ್ತುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಪ್ರಸ್ತುತ ದಿನಗಳಲ್ಲಿ ಹಲವು ಸಮುದಾಯಗಳಿಂದ ಮೀಸಲಾತಿ ಕೂಗು ಎದ್ದಿದೆ. ಆದರೆ ತುಳಿತಕ್ಕೊಳಗಾದವರ ಬಗ್ಗೆ ಯಾವತ್ತಾದರು ಧ್ವನಿ ಎತ್ತಿದ್ದಾರೆಯೇ ಎಂದು ನಾಗಮೋಹನ್ ದಾಸ್ ಪ್ರಶ್ನಿಸಿದರು.

ಆ ವರ್ಗದಿಂದ ಈ ವರ್ಗಕ್ಕೆ, ಒಬಿಸಿಯಿಂದ ಎಸ್‍ಸಿಗೆ, 3ಎಯಿಂದ 2ಎಗೆ.. ಹೀಗೆ ಹಲವು ಸಮುದಾಯಗಳು ಮೀಸಲಾತಿ ಬಗ್ಗೆ ಬೇಡಿಕೆ ಇಟ್ಟಿವೆ. ಆದರೆ ತುಳಿತಕ್ಕೊಳಗಾದವರ ಬಗ್ಗೆ ಯಾವಾಗಾದರೂ ಧ್ವನಿ ಎತ್ತಿದ್ದೇವಾ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮೀಸಲಾತಿ ಪಟ್ಟಿಯಲ್ಲಿರುವ, ಕೆಳ ವರ್ಗದಲ್ಲಿರುವ ಅನೇಕ ಸಣ್ಣ ಸಣ್ಣ ಸಮುದಾಯಗಳು ಕಳೆದ 70 ವರ್ಷಗಳಿಂದ ಮೀಸಲಾತಿ ಸೌಲಭ್ಯ ಅನುಭವಿಸುತ್ತಿವೆ. ಆದಿವಾಸಿ, ಅಲೆಮಾರಿ, ಕರ್ಮಚಾರಿ ಮತ್ತಿತರ ಸಮುದಾಯಗಳ, ಕೊಳಚೆ ನಿವಾಸಿಗಳು ಇಂದಿಗೂ ನಮ್ಮ ಕಣ್ಣ ಮುಂದೆ ಭೀಕರ ಬದುಕು ನಡೆಸುತ್ತಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣವಿಲ್ಲ. ಇಂತಹ ಧ್ವನಿಯಿಲ್ಲದವರಿಗಾಗಿ ನಾವು ಇಂದು ಧ್ವನಿ ಎತ್ತಬೇಕಾಗಿದೆ ಎಂದರು. 

ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಎಂ.ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜ, ಎಲ್.ಎಚ್. ಅರುಣ್‍ಕುಮಾರ್, ಜಿ.ಎಸ್.ಯತೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News