‘ಸ್ಟಾರ್' ಹೊಟೇಲ್ ಉದ್ಯಮಕ್ಕೆ ‘ಕೈಗಾರಿಕೆ ಸ್ಥಾನಮಾನ': ಸಚಿವ ಸಿ.ಪಿ.ಯೋಗೇಶ್ವರ್

Update: 2021-02-20 17:06 GMT

ಬೆಂಗಳೂರು, ಫೆ 20: ‘ಕೋವಿಡ್ ಸಂಕಷ್ಟದಿಂದ ನಲುಗಿರುವ ಪ್ರವಾಸೋದ್ಯಮ ಪುನಶ್ಚೇತನಕ್ಕೆ ‘ಸ್ಟಾರ್' ಹೊಟೇಲ್ ಉದ್ಯಮಕ್ಕೆ ವಾಣಿಜ್ಯ ಚಟುವಟಿಕೆ ಬದಲಿಗೆ ‘ಕೈಗಾರಿಕೆ ಸ್ಥಾನಮಾನ' ಕಲ್ಪಿಸಲು ನೀಡಲು ತೀರ್ಮಾನಿಸಿದೆ' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಕುಸಿದಿದೆ. ಜೊತೆಗೆ ಸ್ಟಾರ್ ಹೊಟೇಲ್ ಉದ್ಯಮಕ್ಕೂ ಆರ್ಥಿಕ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ ಪುನಶ್ಚೇತನಕ್ಕೆ ರಾಜ್ಯದ ಒಟ್ಟು 62 ಸ್ಟಾರ್ ವರ್ಗಿಕೃತ ಹೊಟೇಲ್‍ಗಳಿಗೆ ಕೈಗಾರಿಕೆ ಸ್ಥಾನ ನೀಡಲಾಗುತ್ತಿದೆ' ಎಂದರು.

500 ಕೋಟಿ ರೂ. ಹೊರೆ: ತೆರಿಗೆ, ಶುಲ್ಕ ಸೇರಿದಂತೆ ಹೊಟೇಲ್ ಉದ್ಯಮ ಪ್ರೋತ್ಸಾಹಿಸಲು ಸಬ್ಸಿಡಿ ನೀಡುತ್ತಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಮುಂದಿನ ಐದು ವರ್ಷಗಳಿಗೆ ಸುಮಾರು 500 ಕೋಟಿ ರೂ.ಗಳನ್ನು ಆರ್ಥಿಕ ಹೊರೆಯಾಗಲಿದೆ ಎಂದ ಅವರು, ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನ ನೀಡುವುದರಿಂದ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದರು.

ಕೋವಿಡ್‍ನಿಂದ ಸಣ್ಣಪುಟ್ಟ ಹೊಟೇಲ್‍ಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೆ, ಸರಕಾರ ಇದೀಗ ಕೈಗಾರಿಕಾ ಸ್ಥಾನ ನೀಡುತ್ತಿರುವುದು ಸಿಂಗಲ್ ‘ಸ್ಟಾರ್'ನಿಂದ ಫೈವ್ ಸ್ಟಾರ್ ಹೊಟೇಲ್‍ಗಳಿಗೆ. ಈ ‘ಸ್ಟಾರ್' ವರ್ಗೀಕೃತ(ಕೆಟಗರಿ)ವನ್ನು ಕೇಂದ್ರ ಸರಕಾರ ನಿರ್ಧರಿಸಲಿದೆ ಎಂದ ಅವರು, ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕರ್ನಾಟಕ ಹಿಂದಿದೆ ಎಂದರು.

ಅಭಿವೃದ್ಧಿಗೆ ಆದ್ಯತೆ: ಖಾಸಗಿ ಸಹಭಾಗಿತ್ವದಲ್ಲಿ ನಂದಿ ಗಿರಿಧಾಮ, ಜೋಗ ಜಲಪಾತ, ಕೊಡಚಾದ್ರಿ ಬೆಟ್ಟ ಹಾಗೂ ಕೆಮ್ಮಣ್ಣುಗುಂಡಿ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ದಿ ಹಾಗೂ ರೋಪ್ ವೇ, ಕೇಬಲ್ ಕಾರು ವ್ಯವಸ್ಥೆ ಸೇರಿದಂತೆ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಯೋಗೇಶ್ವರ್ ವಿವರಿಸಿದರು.

ಫಿಲಂ ಸಿಟಿ ಇಲ್ಲ: ಬೆಂಗಳೂರು ಹೊರವಲಯದ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಪ್ರದೇಶದಲ್ಲಿ ಫಿಲಂ ಸಿಟಿ ಸ್ಥಾಪಿಸುವುದಿಲ್ಲ. ಬದಲಿಗೆ ಚಿತ್ರಕತೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿದ್ದ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಪಡೆದಿದ್ದು, ಅವುಗಳ ಅಭಿವೃದ್ಧಿಗೆ ಸರಕಾರ ಕ್ರಮ ವಹಿಸಲಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಕೋರ್ಟ್ ಶೀಘ್ರದಲ್ಲೇ ಸೂಕ್ತ ತೀರ್ಪು ನೀಡಲಿದೆ. ಇದರಿಂದ ಎಲ್ಲ ವಿವಾದಗಳಿಗೆ ತೆರೆ ಬೀಳುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಕಾವೇರಿ ಮತ್ತದರ ಉಪನದಿಗಳು ಸೇರಿ ರಾಜ್ಯದ 17 ನದಿಗಳಿಗೆ ಕಲುಷಿತ ನೀರನ್ನು ಬಿಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ನೀರು ಕಲುಷಿತಗೊಳ್ಳದಂತೆ ಇಲಾಖೆ ಕ್ರಮ ವಹಿಸಲಿದೆ ಎಂದರು.

‘ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳಿಗೆ ನನ್ನ ಬೆಂಬಲವಿಲ್ಲ. ಮೀಸಲಾತಿ ಸೌಲಭ್ಯಕ್ಕಾಗಿ ಎಲ್ಲ ಸಮುದಾಯಗಳು ಆಗ್ರಹಿಸುತ್ತಿವೆ. ಈ ಕುರಿತು ಸಿಎಂ ಸಂವಿಧಾನ ಚೌಕಟ್ಟಿನಲ್ಲೇ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಒಕ್ಕಲಿಗರು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬಂದಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಸೂಚನೆ ನೀಡಿದರೆ ಹೋರಾಟಕ್ಕೆ ತೆರಳುವ ಕುರಿತು ಆಲೋಚಿಸುತ್ತೇನೆ'

-ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಹಾಗೂ ಪರಸರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News