ಬೌದ್ಧ- ಜೈನ ಧರ್ಮದ ಪಠ್ಯವನ್ನು ಕಡಿತ ಮಾಡಿಲ್ಲ: ಸುರೇಶ್ ಕುಮಾರ್ ಸ್ಪಷ್ಟನೆ

Update: 2021-02-20 18:30 GMT

ಬೆಂಗಳೂರು, ಫೆ.20: ನಮ್ಮ ರಾಜ್ಯದ ಆರನೆ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದ 7ನೆ ಪಾಠದ ಬಗ್ಗೆ ಪತ್ರಿಕೆಗಳಲ್ಲಿ ತಪ್ಪು ಗ್ರಹಿಕೆಯಿಂದ ಸುದ್ದಿ ಪ್ರಕಟವಾಗಿದ್ದು, ಬೌದ್ಧ ಹಾಗೂ ಜೈನ ಧರ್ಮದ ಪಠ್ಯದ ಒಂದು ಅಂಶವನ್ನು ಸಹ ಸರಕಾರ ಕಡಿತ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಾವೆಲ್ಲ ಗೌತಮ ಬುದ್ಧ ಹಾಗೂ ಮಹಾವೀರ ತೀರ್ಥಂಕರರ ಜೀವನ ಹಾಗೂ ವಿಚಾರಗಳಿಂದ ಪ್ರಭಾವಿತರಾದವರು. ಅವರಿಗೆ ಸಂಬಂಧಿಸಿದ ಪಾಠಗಳನ್ನು ಕೈ ಬಿಡುವ ಬಗ್ಗೆ ನಾವು ಊಹೆ ಮಾಡಲು ಸಾಧ್ಯವಿಲ್ಲ. ಎರಡು ತಿಂಗಳ ಹಿಂದೆ ಮಂತ್ರಾಲಯದ ಸ್ವಾಮೀಜಿ ನನಗೆ ದೂರವಾಣಿ ಕರೆ ಮಾಡಿ, ಆರನೆ ತರಗತಿಯ ಮಕ್ಕಳಿಗೆ ಬೋಧಿಸುತ್ತಿರುವ ಸಮಾಜ ವಿಜ್ಞಾನ ವಿಷಯದಲ್ಲಿನ ಪಾಠದಲ್ಲಿ ಬಳಸಿರುವ ಕೆಲವು ಪದಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದರು.

ಆರನೇ ತರಗತಿಯ ಮಕ್ಕಳ ವಯೋಮಾನ ಸರ್ವೆ ಸಾಮಾನ್ಯವಾಗಿ 10-11 ವರ್ಷ ಇರುತ್ತದೆ. ಆ ಮಕ್ಕಳ ವಯೋಮಾನಕ್ಕೆ ತಕ್ಕಂತೆ ನಮ್ಮ ಪುಸ್ತಕ ಇರಬೇಕು. ಅದರಲ್ಲಿ ಒಂದು ಜನಾಂಗವನ್ನು ಟೀಕಿಸುವ ಅಥವಾ ದ್ವೇಷಿಸುವ ಅಂಶಗಳು ಇರಬಾರದು ಎಂದು ತಿಳಿಸಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು.

ಹೊಸ ಧರ್ಮಗಳ ಉದಯ ಎಂಬ ಪಾಠದಲ್ಲಿ ಬೌದ್ಧ ಹಾಗೂ ಜೈನ ಧರ್ಮಗಳ ಪರಿಚಯ ಮಾಡುವ ಮುನ್ನ ಇರುವ ಪೀಠಿಕೆಯಲ್ಲಿ ಒಂದು ಜಾತಿ, ಸಮುದಾಯ, ಅವುಗಳ ಆಚಾರ, ಸಂಸ್ಕೃತ ಭಾಷೆಗೆ ಸಂಬಂಧಿಸಿದಂತೆ ಅನಗತ್ಯವಾಗಿ ಉಲ್ಲೇಖಿಸಿರುವುದರಿಂದ ಒಂದು ವರ್ಗದ ಭಾವನೆಗಳಿಗೆ ಘಾಸಿಯಾಗಿದೆ ಎಂದು ಅವರು ಹೇಳಿದರು.

ಆರನೇ ತರಗತಿಯ ಮಕ್ಕಳಿಗೆ ನಾವು ಸಮಾಜದ ಬಗ್ಗೆ ಸಕಾರಾತ್ಮಕವಾದ ಅಂಶಗಳನ್ನು ತಿಳಿಸುವ ಪ್ರಯತ್ನ ಮಾಡಬೇಕೆ ಹೊರತು, ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡಬಾರದು. ಇದೇ ವಿಷಯದ ಆರನೇ ಪಾಠದಲ್ಲಿ ಕ್ರೈಸ್ತ ಹಾಗೂ ಇಸ್ಲಾಮ್ ಧರ್ಮದ ಬಗ್ಗೆ ತಿಳಿಸಲಾಗಿದೆ. ಅಲ್ಲಿ ಮಾತ್ರ ಯಾವುದೇ ಪೀಠಿಕೆ ಇಲ್ಲ. ಆದರೆ, ಬೌದ್ಧ ಮತ್ತು ಜೈನ ಧರ್ಮದ ಪರಿಚಯಕ್ಕೆ ಮುನ್ನ ಪೀಠಿಕೆ ಇದೆ. ಆದುದರಿಂದ, ಅನಗತ್ಯವಾಗಿ ಉಲ್ಲೇಖವಾಗಿರುವ ಪೀಠಿಕೆಯನ್ನು ಈ ವರ್ಷ ಬೋಧನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದೇವೆಯೇ ಹೊರತು, ಬೌದ್ಧ ಹಾಗೂ ಜೈನ ಧರ್ಮದಲ್ಲಿನ ಒಂದು ಅಂಶವನ್ನು ಕೈ ಬಿಡಲಾಗಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News