ಅಟ್ಲಾಂಟಿಕ್ ಮಿತ್ರಕೂಟ ಮತ್ತೆ ಜೀವಂತ: ಬೈಡನ್ ಘೋಷಣೆ

Update: 2021-02-20 18:49 GMT

ವಾಶಿಂಗ್ಟನ್, ಫೆ. 20: ಅಟ್ಲಾಂಟಿಕ್ ಮಿತ್ರಕೂಟ ಮತ್ತೆ ಜೀವ ಪಡೆದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಘೋಷಿಸಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಜಾಗತಿಕ ಆಕ್ರಮಣದ ವಿರುದ್ಧದ ಪಾಶ್ಚಾತ್ಯ ದೇಶಗಳ ಹೋರಾಟಕ್ಕೆ ನಾಯಕತ್ವ ನೀಡಲು ಅಮೆರಿಕ ಮತ್ತೆ ಸಿದ್ಧವಾಗಿದೆ ಎಂದು ತನ್ನ ಪ್ರಭಾವಯುತ ಭಾಷಣದಲ್ಲಿ ಅವರು ಹೇಳಿದರು.

ಅವರು ವಾರ್ಷಿಕ ಮ್ಯೂನಿಕ್ ಭದ್ರತಾ ಸಮ್ಮೇಳನವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ ಮಾತನಾಡಿದ ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್, ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಂಘರ್ಷಯುತ ಅವಧಿಯ ಬಳಿಕ ಬಹುಪಕ್ಷೀಯ ವ್ಯವಸ್ಥೆಗೆ ಮರಳಿದ ಅಮೆರಿಕವನ್ನು ಸ್ವಾಗತಿಸಿದರು.

‘‘ನಾನು ಜಗತ್ತಿಗೆ ಸ್ಪಷ್ಟ ಸಂದೇಶವೊಂದನ್ನು ನೀಡುತ್ತಿದ್ದೇನೆ- ಅಮೆರಿಕ ಹಿಂದಿರುಗಿದೆ. ಅಟ್ಲಾಂಟಿಕ್ ಮೈತ್ರಿಕೂಟ ಹಿಂದಿರುಗಿದೆ’’ ಎಂದು ಶ್ವೇತಭವನದಿಂದ ಮಾಡಿದ ಭಾಷಣದಲ್ಲಿ ಬೈಡನ್ ಹೇಳಿದರು.

‘‘ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಗಳ ನಡುವಿನ ಜಾಗತಿಕ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಯಶಸ್ಸಿಗಿರುವ ಏಕೈಕ ದಾರಿ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News