ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರಳಿದ ಅಮೆರಿಕ

Update: 2021-02-20 18:50 GMT

ವಾಶಿಂಗ್ಟನ್, ಫೆ. 20: ಅಮೆರಿಕ ಶುಕ್ರವಾರ ಪ್ಯಾರಿಸ್ ಪರಿಸರ ಒಪ್ಪಂದಕ್ಕೆ ಅಧಿಕೃತವಾಗಿ ಮರಳಿದೆ ಹಾಗೂ ಜಾಗತಿಕ ತಾಪಮಾನದ ವಿರುದ್ಧದ ಹೋರಾಟವನ್ನು ಅಮೆರಿಕ ತನ್ನ ಪ್ರಮುಖ ಆದ್ಯತೆಯನ್ನಾಗಿ ಮಾಡುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದರು.

ಅಮೆರಿಕದ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಬಳಿಕ, ಜಗತ್ತಿನ ಅತಿ ದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ ಎರಡನೇ ಅತಿ ದೊಡ್ಡ ಇಂಗಾಲದ ಡೈ ಆಕ್ಸೈಡ್ ಉತ್ಪಾದಕ ದೇಶ (ಅಮೆರಿಕ) 2015ರ ಪ್ಯಾರಿಸ್ ಪರಿಸರ ಒಪ್ಪಂದಕ್ಕೆ ಮರಳಿದೆ.

ಅಪಾಯಕಾರಿಯಾಗಿ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ನಿಭಾಯಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಪ್ಯಾರಿಸ್ ಪರಿಸರ ಒಪ್ಪಂದವನ್ನು ರೂಪಿಸಲಾಗಿದೆ.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2017ರಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಅಮೆರಿಕವನ್ನು ಈ ಒಪ್ಪಂದದಿಂದ ಹೊರ ತಂದಿದ್ದರು.

ಅಮೆರಿಕವು ಔಪಚಾರಿಕವಾಗಿ ಒಪ್ಪಂದಕ್ಕೆ ಮರುಸೇರ್ಪಡೆಗೊಂಡ ಗಂಟೆಗಳ ಬಳಿಕ, ಮ್ಯೂನಿಕ್ ಭದ್ರತಾ ಸಮ್ಮೇಳನವನ್ನು ಶ್ವೇತಭವನದಿಂದ ಆನ್‌ಲೈನ್ ಮೂಲಕ ಉದ್ದೇಶಿಸಿ ಮಾತನಾಡಿದ ಟ್ರಂಪ್, ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕಾಗಿನ ಬದ್ಧತೆಯನ್ನು ದುಪ್ಪಟ್ಟುಗೊಳಿಸುವಂತೆ ಯುರೋಪಿಯನ್ ದೇಶಗಳಿಗೆ ಕರೆ ನೀಡಿದರು.

‘‘ಹವಾಮಾನ ಬದಲಾವಣೆಯನ್ನು ನಿಲ್ಲಿಸುವ ಪ್ರಯತ್ನಗಳನ್ನು ವಿಳಂಬಗೊಳಿಸಲು ಅಥವಾ ಅಗತ್ಯಕ್ಕಿಂತ ಕಡಿಮೆ ಪ್ರಯತ್ನಗಳನ್ನು ಮಾಡಲು ಇನ್ನು ಸಾಧ್ಯವಿಲ್ಲ. ಇದು ಜಾಗತಿಕ ಅಸ್ತಿತ್ವಕ್ಕೆ ಸಂಬಂಧಿಸಿದ ಬಿಕ್ಕಟ್ಟು. ಇದರ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News