ಜನರಿಗೆ ಮುಖ ತೋರಿಸಲಾಗದ್ದಕ್ಕೆ ಮೋದಿ ಗಡ್ಡ ಬೆಳೆಸಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

Update: 2021-02-21 12:28 GMT

ಬೆಂಗಳೂರು, ಫೆ.21: ಬಡವರು, ರೈತರು, ಜನಸಾಮಾನ್ಯರ ಜೀವವನ್ನು ದುಸ್ತರ ಮಾಡಿರುವ ಈ ಜನ ವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ನಾವು ಮಾಡಬೇಕಿದೆ. ಇವರ ವಿರುದ್ಧ ಸಂಘರ್ಷ ಮಾಡೋಣ, ಜನರ ಬಳಿ ಹೋಗೋಣ, ಅವರ ವಿಶ್ವಾಸವನ್ನು ಗೆದ್ದು ಈ ಸರಕಾರವನ್ನು ಕಿತ್ತೊಗೆಯೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ರವಿವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಹಾಗೂ ಆರ್. ಧ್ರುವನಾರಾಯಣ ಅವರ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಕಳೆದ ಮೂರು ತಿಂಗಳಿಂದ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಪಾಪ ಅವರಿಗೆ ಮುಖ ತೋರಿಸೋಕೆ ಆಗುತ್ತಿಲ್ಲ. ಅದಕ್ಕಾಗಿ ಗಡ್ಡ ಬಿಟ್ಟಿದ್ದಾರೆ ಎಂದು ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆಯವರು 11 ಬಾರಿ ಚುನಾವಣೆ ಗೆದ್ದವರು. ಈಗ ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ನರೇಂದ್ರ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಗುಡುಗಬೇಕಾದರೆ ಇವರಿಗೆ ಮಾತ್ರ ಸಾಧ್ಯ. ಕೇಂದ್ರದಲ್ಲಿ ಅತ್ಯಂತ ಕೆಟ್ಟ ಸರಕಾರ ಅಧಿಕಾರದಲ್ಲಿದೆ. ನರೇಂದ್ರ ಮೋದಿಯಂತೆ ಸುಳ್ಳು ಹೇಳುವವರು ಯಾರು ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಗೋಮುಖ ವ್ಯಾಘ್ರ. ಜನರು, ಯುವಕರನ್ನ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾರೆ. ಯುವಕರು ಮೋದಿ, ಮೋದಿ ಅಂತ ಹೇಳುತ್ತಿದ್ದರು. ಅಂತಹ ಯುವಕರಿಗೆ ಮೋದಿ ದ್ರೋಹ ಬಗೆದಿದ್ದಾರೆ. ಅದನ್ನು ಸಂಸತ್ತಿನಲ್ಲಿ ಬಯಲು ಮಾಡುವ ಶಕ್ತಿ ಖರ್ಗೆಯವರಿಗಿದೆ. ಮೋದಿ ಬಣ್ಣವನ್ನು ನಾವು ಬಯಲು ಮಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಚ್ಛೇದಿನ್ ಆಯೇಂಗೆ, ನಾ ಖಾವೂಂಗಾ, ನಾ ಖಾನೆ ದೂಂಗಾ ಎಂದು ಹೇಳುತ್ತಿದ್ದ ಮೋದಿ, ಜನರಿಗೆಲ್ಲ ಟೋಪಿ ಹಾಕಿಬಿಟ್ಟರು. ಇವರು ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ಕುಸಿದಿದೆ. ಜಿಡಿಪಿ ಈ ವರ್ಷ ಮೈನಸ್, ಮುಂದಿನ ವರ್ಷವೂ ಮೈನಸ್. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಪ ಹೆಣ್ಣುಮಗಳಿದ್ದಾರೆ. ಅವರ ಕೈಯಲ್ಲೂ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ 90 ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ. 380 ರೂ.ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ 781 ರೂ.ಆಗಿದೆ. ಪೆಟ್ರೋಲ್ ಬೆಲೆ 91.80 ರೂ., ಡಿಸೇಲ್ ಬೆಲೆ 80 ರೂ.ಆಗಿದೆ. ಇದೇನಾ ಮೋದಿಯವರೆ ನಿಮ್ಮ ಅಚ್ಛೇದಿನ್? ರೈತರ ಆದಾಯ ಕುಸಿಯುತ್ತಲೆ ಇದೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಬಡವರಿಗೆ ಉಚಿತವಾಗಿ ತಲಾ 7 ಕೆ.ಜಿ.ಅಕ್ಕಿ ಕೊಡಲಾಗುತ್ತಿತ್ತು. ಅದನ್ನು 5 ಕೆ.ಜಿ.ಗೆ ಇಳಿಸಿದ್ದಾರೆ. ಮುಂದಿನ ದಿನಗಳಲ್ಲಿ 3 ಕೆ.ಜಿ.ಗೆ ಇಳಿಸುತ್ತಾರೆ. ಅಕ್ಕಿಯನ್ನು ಇವರಪ್ಪನ ಮನೆ ದುಡ್ಡಲ್ಲಿ ಕೊಡುತ್ತಾರಾ. ಜನರ ದುಡ್ಡಿನಿಂದ ತಾನೆ ಕೊಡೋದು. ಬಿಜೆಪಿಯವರಿಗೆ ಬಡವರ ಬಗ್ಗೆ ಕಿಂಚಿತ್ತೂ ಕನಿಕರವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾನು 11 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೆ. ಕಳೆದ ಬಾರಿ ನಾನು ಸೋಲಬೇಕಾಯಿತು. 1969 ರಲ್ಲಿ ಇಂದಿರಾಗಾಂಧಿ ನಮ್ಮ ಊರಿಗೆ ಬಂದಿದ್ದರು. ಆಗ ನಮ್ಮಂತ ಯುವಕರನ್ನ ಗುರುತಿಸಿ, ಟಿಕೆಟ್ ಕೊಡದೇ ಇದ್ದಿದ್ದರೆ ನಾನು 11 ಬಾರಿ ಗೆಲ್ಲಲು ಆಗುತ್ತಿರಲಿಲ್ಲ. ಪಕ್ಷ ಹಾಗೂ ಕಾರ್ಯಕರ್ತರ ಕೊಡುಗೆಯಿಂದ ನಮ್ಮ ಗೆಲುವು. ನಿಷ್ಠೆಯಿಂದ ಕೆಲಸ ಮಾಡಿದರೆ, ಒಂದಲ್ಲ, ಒಂದು ದಿನ ಪಕ್ಷ ಗುರುತಿಸುತ್ತೆ ಎಂದರು.

ನಾನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗುತ್ತೇನೆ ಅನ್ನೋದು ಗೊತ್ತಿರಲಿಲ್ಲ. ಏಳೆಂಟು ತಿಂಗಳ ಹಿಂದೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಈ ಬಗ್ಗೆ ಸುಳಿವು ಕೊಟ್ಟಿದ್ದರು. ಅವರ ಕೊಡುಗೆಯನ್ನು ನಾನು ಮರೆಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರೈತ ವಿರೋಧಿ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ. ಮೂರು ತಿಂಗಳಿಂದ ಹೋರಾಟ ನಡೆಯುತ್ತಿದೆ. ರೈತರ ಕಣ್ಣೀರು ಒರೆಸುವ ಕೆಲಸ ಮೋದಿ ಮಾಡುತ್ತಿಲ್ಲ. ಈಗ ಖಾಲಿಸ್ತಾನ್ ನವರು ಸೇರಿಕೊಂಡಿದ್ದಾರೆ ಅಂತಿದ್ದಾರೆ. ಖಾಲಿಸ್ತಾನ್ ನವರು ಸೇರೋಕೆ ಹೇಗೆ ಅವಕಾಶ ಕೊಟ್ರಿ? ನಿಮ್ಮ ಪೊಲೀಸರು ಯಾಕೆ ಬಿಟ್ಟರು? ನಿಮ್ಮ ಗುಪ್ತಚರ ಇಲಾಖೆ ಸುಮ್ಮನಾಗಿದ್ದೇಕೆ? ದಿಲ್ಲಿಯಲ್ಲಿ ಯಾವಾಗಲೂ ಹೈ ಸೆಕ್ಯೂರಿಟಿ ಇರುತ್ತೆ, ಅವರು ಅಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಅರಿವು ಮೂಡಿಸಬೇಕಿದೆ. ಜನರಿಗೆ ಅದೇನು ಮರಳು ಮಾಡಿದ್ದಾರೋ ಗೊತ್ತಿಲ್ಲ, ಜನ ಮೋದಿ ಮೋದಿ ಅಂತಾನೇ ಇದ್ದಾರೆ. 15 ಲಕ್ಷ ಹಣ ಅಕೌಂಟಿಗೆ ಬರಲಿಲ್ಲ. ಯುವಜನರಿಗೆ ಉದ್ಯೋಗ ಕೊಡಲಿಲ್ಲ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. 14 ಲಕ್ಷ ಕೋಟಿ ಸಾಲ ಪಡೆದಿದ್ದಾರೆ. ಅವರೆಲ್ಲ ದೇಶ ಬಿಟ್ಟು ಹೊರಗೆ ಹೋಗ್ತಿದ್ದಾರೆ ಎಂದು ಅವರು ಹೇಳಿದರು.

ಹಮ್ ದೊ, ಹಮಾರೆ ದೊ ಅಂತ ರಾಹುಲ್ ಗಾಂಧಿ ಹೇಳುತ್ತಾರೆ. ಅಂದರೆ, ಮೋದಿ, ಶಾ ಹಾಗೂ ಅಂಬಾನಿ, ಅದಾನಿ ಅಷ್ಟೇ. ಈ ನಾಲ್ವರಿಗೆ ಮಾತ್ರ ಅಚ್ಛೇದಿನ್. ದೇಶ ಹಾಗೂ ಯುವಕರನ್ನು ಮೋದಿ ಹಾಳು ಮಾಡುತ್ತಿದ್ದಾರೆ. ಆದರೂ, ಜನ ಇವರನ್ನೂ ಹೊಗಳುತ್ತಲೆ ಇದ್ದಾರೆ. ಆರು ವರ್ಷದಿಂದ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ, ಅವರು ಹೇಳಿದ್ದಷ್ಟೇ ಹಾಕಬೇಕಿದೆ. ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರ ನೀಡಲ್ಲ. ಕೇವಲ ಅವರದ್ದು ಮನ್ ಕಿ ಬಾತ್ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಗಾರಿದರು.

ರಾಜ್ಯ ಕಾಂಗ್ರೆಸ್ ನಾಯಕರು ಹೋದಕಡೆಯಲ್ಲ, ‘ನಿಮಗೆ ಟಿಕೆಟ್ ಅಂತ ಹೇಳ್ಬೇಡಿ’. ಅಲ್ಲಿ ಭರವಸೆ ಕೊಟ್ಟು ಬರಬೇಡಿ. ಅದಕ್ಕೆ ಕಮಿಟಿ ಇದೆ, ಹೈಕಮಾಂಡ್ ಇದೆ. ಇದನ್ನು ಸರಿಯಾಗಿ ಪಾಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News