ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

Update: 2021-02-21 14:00 GMT

ರಾಮನಗರ, ಫೆ.21: ಬಹುಕೋಟಿ ವಂಚನೆಯ ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ಅಧಿಕಾರವಧಿಯಲ್ಲೆ ಈ ಹಗರಣ ಹೊರ ಬಂದಿತ್ತು. ನಾನೇ, ಸಿಸಿಬಿಗೆ ಈ ಹಗರಣದ ತನಿಖೆ ನಡೆಸುವಂತೆ ಆದೇಶ ಮಾಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಹಗರಣದ ಆರೋಪಿ ದೇಶ ಬಿಟ್ಟು ದುಬೈಗೆ ಪರಾರಿಯಾಗಿದ್ದ. ನಮ್ಮ ಅಧಿಕಾರಿಗಳೇ ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದರು. ಜನರ ಹಣವನ್ನು ಲೂಟಿ ಮಾಡಿದವರಿಗೆ ಈ ಕ್ಷಣದ ವರೆಗೆ ರಕ್ಷಣೆ ಕೊಟ್ಟವನಲ್ಲ ನಾನು ಎಂದರು.

ಪ್ರಕರಣದ ವಿಚಾರಣೆ ವೇಳೆ ‘ಕುಮಾರಸ್ವಾಮಿ ಅವರಿಗೆ ಸೇರಬೇಕೆಂದಯ ಹಣ ಸಂಗ್ರಹಣೆ ಮಾಡಲಾಗಿತ್ತು. ಆ ಹಣ ಕುಮಾರಸ್ವಾಮಿಗೆ ಸೇರಿಲ್ಲ’ ಎಂಬ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಸಿಎಂ ಆಗಿದ್ದಾಗ ಗೃಹ ಕಚೇರಿ ಕೃಷ್ಣಾದಲ್ಲಿದ್ದೆ. ಆಗ ರೋಷನ್ ಬೇಗ್ ಬಂದು ಒಂದು ಇಫ್ತಾರ್ ಕೂಟ ಇದೆ ಬರಬೇಕೆಂದು ಹಠ ಹಿಡಿದರು. ಅವರ ಜೊತೆ ನಾನು ಕೃಷ್ಣಾದಿಂದ ತೆರಳಿದೆ. ಆ ವೇಳೆ ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಅವರ ಪರಿಚಯ ನನಗೆ ಇರಲಿಲ್ಲ. ಆಗ ರೋಷನ್ ಬೇಗ್ ಅವರೇ ಮುಂದೆ ಬಂದು ಆ ವ್ಯಕ್ತಿಯನ್ನು ಮಹಾನ್ ದಾನಿಗಳು ಶಿಕ್ಷಣ ಸಂಸ್ಥೆಗಳಿಗೆಲ್ಲ ಸಾಕಷ್ಟು ದಾನ, ಧರ್ಮ ಮಾಡಿದ್ದಾರೆ ಎಂದು ಪರಿಚಯಿಸಿದರು ಅಷ್ಟೇ ಎಂದು ಕುಮಾರಸ್ವಾಮಿ ತಿಳಿಸಿದರು.

ಅಲ್ಲಿಯವರೆಗೆ ಆತ ಯಾರು ಅಂತಾನೆ ನನಗೆ ಗೊತ್ತಿರಲಿಲ್ಲ. ಈ ಹಗರಣ ಬೆಳಕಿಗೆ ಬಂದಾಗ ತನಿಖೆಗೆ ಆದೇಶ ಮಾಡಿದ್ದೇ ನಾನು. ಇದರಲ್ಲಿ ನನ್ನ ಪಾತ್ರ ಎಲ್ಲಿರುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News