ಮುಂಬೈ:ಮದುವೆ ಪ್ರಸ್ತಾವ ತಿರಸ್ಕರಿಸಿದ ಯುವತಿಯನ್ನು ಚಲಿಸುವ ರೈಲಿನೆದುರು ತಳ್ಳಿ ಪರಾರಿಯಾದ ಯುವಕ

Update: 2021-02-21 16:42 GMT
ಸಾಂರ್ದಭಿಕ ಚಿತ್ರ

ಮುಂಬೈ,ಫೆ.21: ಯುವಕನೋರ್ವ ತನ್ನ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ 21ರ ಹರೆಯದ ಯುವತಿಯನ್ನು ಚಲಿಸುವ ರೈಲಿನೆದುರು ತಳ್ಳಿದ ಘಟನೆ ಶುಕ್ರವಾರ ಇಲ್ಲಿಯ ಖಾರ್ ರೈಲು ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯುವತಿ ಬದುಕುಳಿದಿದ್ದು,ತಲೆಗೆ ಗಂಭೀರ ಗಾಯವಾಗಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ತಲೆಗೆ 12 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದರು.

ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ, ವಡಾಳಾ ನಿವಾಸಿ ಸುಮೇಧ್ ಜಾಧವ್ ನನ್ನು ಹನ್ನೆರಡೇ ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಾರ್ ನಿವಾಸಿಯಾಗಿರುವ ಯುವತಿ ಮತ್ತು ಆರೋಪಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು,ಕಳೆದೆರಡು ವರ್ಷಗಳಿಂದ ಅವರ ನಡುವೆ ಗೆಳೆತನವುಂಟಾಗಿತ್ತು. ಆದರೆ ಆರೋಪಿ ಕುಡುಕ ಎನ್ನುವುದು ಇತ್ತೀಚಿಗೆ ಯವತಿಗೆ ತಿಳಿದ ಬಳಿಕ ಆತನಿಂದ ಅಂತರವನ್ನು ಕಾಯ್ದುಕೊಂಡಿದ್ದಳು. ಆದರೂ ಆತ ಆಕೆಗೆ ತೊಂದರೆ ನೀಡುವುದನ್ನು ಮಂದುವರಿಸಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದರೂ ಆತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ ಚೌಗುಲೆ ತಿಳಿಸಿದರು.

ಯುವತಿ ಶುಕ್ರವಾರ ಸಂಜೆ ತನ್ನ ಮನೆಗೆ ಮರಳಲು ಅಂಧೇರಿ ರೈಲು ನಿಲ್ದಾಣದಲ್ಲಿ ಲೋಕಲ್ ಹತ್ತಿದ್ದು, ಜಾಧವ್ ಆಕೆಯನ್ನು ಹಿಂಬಾಲಿಸಿದ್ದ. ಖಾರ್ ನಿಲ್ದಾಣದಲ್ಲಿ ಇಳಿದ ಯುವತಿ ಅಲ್ಲಿ ತನಗಾಗಿ ಕಾಯುತ್ತಿದ್ದ ತಾಯಿಯ ಬಳಿ ಜಾಧವ್ ತನ್ನನ್ನು ಹಿಂಬಾಲಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು. ಆ ವೇಳೆ ಅಲ್ಲಿಗೆ ಬಂದ ಜಾಧವ್ ತನ್ನೊಂದಿಗೆ ಬರುವಂತೆ ಮತ್ತು ತನ್ನನ್ನು ಮದುವೆಯಾಗುವಂತೆ ಯುವತಿಯನ್ನು ಒತ್ತಾಯಿಸಿದ್ದ. ಆಕೆ ನಿರಾಕರಿಸಿದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊದಲು ಬೆದರಿಸಿದ್ದ ಜಾಧವ್ ಬಳಿಕ ಯುವತಿಯನ್ನು ಎಳೆದೊಯ್ದು ಚಲಿಸುತ್ತಿದ್ದ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಖಾಲಿಜಾಗದಲ್ಲಿ ಆಕೆಯನ್ನು ತಳ್ಳಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News