ಭಾರತದಲ್ಲಿ ಬ್ರಾಹ್ಮಣವಾದ, ಬಂಡವಾಳವಾದವೇ ದೊಡ್ಡ ಶತ್ರು: ದಿನೇಶ್ ಅಮಿನ್‍ ಮಟ್ಟು

Update: 2021-02-21 15:16 GMT

ಬೆಂಗಳೂರು, ಫೆ. 21: ‘ಭಾರತದಲ್ಲಿ ಬ್ರಾಹ್ಮಣವಾದ ಹಾಗೂ ಬಂಡವಾಳವಾದ ದೊಡ್ಡ ಶತ್ರುಗಳು. ಇವೆರಡನ್ನೂ ಒಟ್ಟಿಗೆ ಎದುರಿಸಬೇಕಾಗಿದ ಅಗತ್ಯವಿದೆ' ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತಿಳಿಸಿದ್ದಾರೆ. 

ರವಿವಾರ ದಸಂಸ ಒಕ್ಕೂಟ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ದೇಶದಲ್ಲಿ ಬ್ರಾಹ್ಮಣವಾದದ ಪ್ರತಿಪಾದಕರೇ ಬಂಡವಾಳಶಾಹಿಗಳಾಗಿದ್ದಾರೆ. ಈ ಬಂಡವಾಳಶಾಹಿಗಳೇ ಇವತ್ತು ಸರಕಾರವನ್ನು ನಡೆಸುತ್ತಿದ್ದಾರೆ' ಎಂದು ದೂರಿದರು.

‘ಹೊಸ ಆರ್ಥಿಕ ನೀತಿಯ ಉದ್ದೇಶವೇ ಶಿಕ್ಷಣ ಸೇರಿದಂತೆ ಎಲ್ಲವನ್ನೂ ಖಾಸಗೀಕರಣ ಮಾಡುವುದು. ಆ ಮೂಲಕ ಮೀಸಲಾತಿಯ ಮೂಲ ಆಶಯವನ್ನೇ ಬುಡಮೇಲು ಮಾಡುವುದಾಗಿದೆ. ಹೀಗಾಗಿ ಖಾಸಗಿ ರಂಗ, ಮಾಧ್ಯಮ ಹಾಗೂ ನ್ಯಾಯಾಂಗ ಸೇರಿದಂತೆ ವಿವಿಧ ಉನ್ನತ ಕ್ಷೇತ್ರಗಳಲ್ಲಿ ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿದೆ' ಎಂದು ಅವರು ತಿಳಿಸಿದರು.

‘ದಲಿತ ಸಂಘರ್ಷ ಸಮಿತಿಯಲ್ಲಿ ಹೊಸ ನಾಯಕತ್ವ ಸೃಷ್ಟಿಯಾಗಬೇಕಾದ ಅಗತ್ಯವಿದೆ. ದಸಂಸ ನಾಯಕತ್ವ ಬದಲಾಗಬೇಕೆಂದರೆ ಈಗಿರುವ ನಾಯಕರು ಖುರ್ಚಿ ಖಾಲಿ ಮಾಡಬೇಕೆಂದಲ್ಲ. ಆ ನಾಯಕರೇ ಹೊಸ ನಾಯಕತ್ವದ ಸೃಷ್ಟಿಗೆ ಪ್ರಯತ್ನಿಸಬೇಕಾಗಿದೆ' ಎಂದು ಅವರು ಹೇಳಿದರು.

‘ದಲಿತ ಸಂಘರ್ಷ ಸಮಿತಿ ತನ್ನ ಶಾಖೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಬೇಕಾಗಿದೆ. ವಿದ್ಯಾರ್ಥಿ, ರೈತ, ಕಾರ್ಮಿಕ, ಯುವಜನತೆ, ಮಹಿಳೆ ಸೇರಿದಂತೆ ವಿವಿಧ ವರ್ಗಗಳಾಗಿ ವಿಸ್ತರಣೆಯಾಗಬೇಕು. ಇದರಿಂದ ಹೊಸ ನಾಯಕತ್ವ ಸೃಷ್ಟಿಗೆ ಹೆಚ್ಚು ಅನುವು ಮಾಡಿಕೊಟ್ಟಂತಾಗುತ್ತದೆ' ಎಂದು ಅವರು ತಿಳಿಸಿದರು.

‘ಎಪ್ಪತ್ತು–ಎಂಬತ್ತನೆ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯ ಸಾಮಾಜಿಕ, ರಾಜಕೀಯ ಜಾಗೃತಿಯ ಪರಿಣಾಮವಾಗಿ ಯುವ ಜನತೆ ಆರೆಸ್ಸೆಸ್ ಪ್ರಭಾವಕ್ಕೆ ಸಿಲುಕಲಿಲ್ಲ. ಇಲ್ಲದಿದ್ದರೆ, ನಾನು ಬಜರಂಗ ದಳದ ಕಾರ್ಯಕರ್ತನಾಗಿ ರೂಪಿತನಾಗುತ್ತಿದ್ದೆ' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News