ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ರಂತಹ ನಾಯಕರನ್ನು ಮರೆಯಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

Update: 2021-02-21 15:49 GMT

ಬೆಂಗಳೂರು, ಫೆ.21: ‘ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ ಒಬ್ಬ ವ್ಯಕ್ತಿ ಎಷ್ಟು ನಾಯಕರನ್ನು ಬೆಳೆಸುತ್ತಾನೋ ಅವನು ನಿಜವಾದ ನಾಯಕ’ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ನಾವು ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಅವರಂಥ ನಾಯಕರನ್ನು ಮರೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ರವಿವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಹಾಗೂ ಆರ್.ಧ್ರುವನಾರಾಯಣ ಅವರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲ್ಲಿ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ಮುಖ್ಯ ಅಲ್ಲ. ಕಾಂಗ್ರೆಸ್ ಪಕ್ಷದ ನಿಮ್ಮನ್ನು ವಿಧಾನಸೌಧದಲ್ಲಿ ಕೂರಿಸುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಶಿವಕುಮಾರ್ ಕರೆ ನೀಡಿದರು.

ರಾಮಲಿಂಗಾ ರೆಡ್ಡಿ ವಿದ್ಯಾರ್ಥಿ ಹಾಗೂ ಯುವ ಕಾಂಗ್ರೆಸ್ ನಾಯಕರಾಗಿ, ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ, ಸತತ 8 ಬಾರಿ ವಿಧಾನಸಭೆಗೆ ಸ್ಪರ್ಧಿಸಿ 7 ಬಾರಿ ಗೆದ್ದು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಾನು ಹಾಗೂ ರಾಮಲಿಂಗಾ ರೆಡ್ಡಿ 1985ರಲ್ಲಿ ಜತೆಯಾಗಿ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದೆವು. ಈಗ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಹಂಚಿಕೊಳ್ಳುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಕಷ್ಟ ಕಾಲದಲ್ಲಿ ಅವರು ಪಕ್ಷವನ್ನು ಕಟ್ಟಿದ್ದಾರೆ. ಪಕ್ಷ 36 ಸ್ಥಾನಗಳಿಗೆ ಇಳಿದ ಸಂದರ್ಭದಲ್ಲಿ, ಕಾವೇರಿ ನದಿಯ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ ಗೆದ್ದಿದ್ದ ಪಕ್ಷದ ಏಕೈಕ ಶಾಸಕ ರಾಮಲಿಂಗಾ ರೆಡ್ಡಿ. ಅವರು ಪಕ್ಷದ ಆಧಾರ ಸ್ಥಂಬ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ರಾಮಲಿಂಗಾರೆಡ್ಡಿಯನ್ನು ಕಾರ್ಯಾಧ್ಯಕ್ಷರಾಗಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಧ್ರುವನಾರಾಯಣ ವಿದ್ಯಾರ್ಥಿ ನಾಯಕರಾಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೆ. ಅಲ್ಲಿಂದ ವಿಧಾನಸಭೆ, ಲೋಕಸಭೆ ಪ್ರವೇಶ ಮಾಡಿದ್ದರು. ಕೇವಲ ಒಂದು ಮತದ ಅಂತರದಲ್ಲಿ ವಿಧಾನಸಭೆ ಪ್ರವೇಶಿಸಿದ ದಾಖಲೆ ಕೂಡ ಧ್ರುವನಾರಾಯಣ ಅವರದು. ಧ್ರುವನಾರಾಯಣ ಹಾಗೂ ರಾಮಲಿಂಗಾ ರೆಡ್ಡಿ ಅವರಿಬ್ಬರೂ ಸಜ್ಜನ ರಾಜಕಾರಣಕ್ಕೆ ಹೆಸರು ಮಾಡಿದವರು. ಅವರಿಗೆ ಇಂದು ನಾವು ಹೆಚ್ಚಿನ ಜವಾಬ್ದಾರಿ ನೀಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ನಾವು ನಮ್ಮ ಗುರಿ, ಸಿದ್ಧಾಂತ ಮರೆತಾಗ ಸೋಲನ್ನು ಅನುಭವಿಸಬೇಕಾಗುತ್ತದೆ. ನಾವು ಪಕ್ಷದ ಸಿದ್ಧಾಂತ ತತ್ವದ ಮೇಲೆ ಹೋರಾಡಿದರೆ ಖಂಡಿತಾ ಜಯಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕರು ಮಾಡಿರುವ ತ್ಯಾಗ, ಇತಿಹಾಸ ಎಲ್ಲವನ್ನು ಜನರಿಗೆ ಮುಟ್ಟಿಸಬೇಕು ಎಂದು ಅವರು ಕರೆ ನೀಡಿದರು.

ಇಡೀ ದೇಶ ಕೊರೋನದಿಂದ ತತ್ತರಿಸಿದೆ. ಈ ಸರಕಾರಕ್ಕೆ ನಾವು ಕೊಟ್ಟ ಬೆಂಬಲವನ್ನು ದುರ್ಬಳಕೆ ಮಾಡಿಕೊಂಡರು. ಇಂದು ರೈತರು, ಕಾರ್ಮಿಕರು, ವಿದ್ಯಾರ್ಥಿ, ವ್ಯಾಪಾರಿಗಳು ಎಲ್ಲರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಯಿಂದ ಎಲ್ಲ ಬೆಲೆ ಹೆಚ್ಚಾಗಿದೆ. ಜತೆಗೆ ಸೀಮೆಂಟ್, ಕಬ್ಬಿಣ ಎಲ್ಲವೂ ದುಬಾರಿಯಾಗಿವೆ. ಇವೆಲ್ಲವೂ ಜನರ ಪರ ಧ್ವನಿ ಎತ್ತಲು ಅವಕಾಶ ಕಲ್ಪಿಸಿದೆ ಎಂದು ಶಿವಕುಮಾರ್ ತಿಳಿಸಿದರು.

ನಾವು ಎಷ್ಟು ದಿನ ಇರುತ್ತೇವೆ ಎಂಬುದಕ್ಕಿಂತ ಎಷ್ಟು ಹೋರಾಟ ಮಾಡಿ, ಪಕ್ಷ ಕಟ್ಟುತ್ತೇವೆ ಎಂಬುದು ಮುಖ್ಯ. ಇದು ಕೇವಲ ಡಿ.ಕೆ.ಶಿವಕುಮಾರ್, ಐವರು ಕಾರ್ಯಾಧ್ಯಕ್ಷರಿಂದ ಮಾಡಲು ಸಾಧ್ಯವಿಲ್ಲ. ಈ 68 ಶಾಸಕರು, 5 ಸಂಸದರಿಂದ ಸಾಧ್ಯವಿಲ್ಲ. ಎಲ್ಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಟ್ಟಾಗಿ, ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿದರೆ ಮಾತ್ರ ಇದು ಸಾಧ್ಯ. ನಾನು ಮುಂದಿನ ಮುಖ್ಯಮಂತ್ರಿ ಎಂದು ಕೂಗುವುದು ನನಗೆ ಬೇಕಾಗಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಶಕ್ತಿಶಾಲಿಯಾಗಿ ಬೆಳೆಯಬೇಕು ಎಂದು ಶಿವಕುಮಾರ್ ತಿಳಿಸಿದರು.

ಕೆ.ಜೆ.ಜಾರ್ಜ್ ಹಾಗೂ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಎರಡು ಸಮಿತಿ ಮಾಡಲಾಗಿದೆ. ನಮಗೆ ಕಾಂಗ್ರೆಸ್ ಕಚೇರಿಯೆ ದೇವಾಲಯ. ಎಲ್ಲ ಕ್ಷೇತ್ರದಲ್ಲೂ ಪಕ್ಷದ ಸ್ವಂತ ಅಥವಾ ಬಾಡಿಗೆ ಕಚೇರಿಯಾದರೂ ಇರಬೇಕು. ಈ ಸಮಿತಿ ಪ್ರವಾಸ ಮಾಡಲಿದೆ. ಪಕ್ಷದ ಸಭೆಯನ್ನು ಯಾರ ಮನೆಯಲ್ಲೂ ನಡೆಸುವಂತಿಲ್ಲ. ಅದು ಪಕ್ಷದ ಕಚೆರಿಯಲ್ಲೆ ನಡೆಯಬೇಕು. ಅಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಈ ವರ್ಷ ನೂರು ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ, ಸಿದ್ಧಾಂತ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟವರಿಗೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಒಂದು ಅವಕಾಶ ಮಾಡಿಕೊಡುತ್ತಿದ್ದೇವೆ. ಬೇಷರತ್ತಿನಿಂದ ಬರುವವರಿಗೆ ಅವಕಾಶ ನೀಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಇಂದು ಅನೇಕ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದು ಬಹಳ ನೋವಿನ ವಿಚಾರ. ಈ ವಿಚಾರದಲ್ಲಿ ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬೇಡಿ. ನಾವು ಹಿರಿಯ ನಾಯಕರು ಕೂತು ಆ ಬಗ್ಗೆ ಚರ್ಚಿಸಿ ನಮ್ಮ ನಿರ್ಧಾರ ತಿಳಿಸುತ್ತೇವೆ.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಇನ್ನಿತರ ಮುಖಂಡರು, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News