ಆನ್‍ಲೈನ್ ಮದ್ಯ ಮಾರಾಟಕ್ಕೆ ಅನುಮತಿಗೆ ನಿರಾಕರಿಸಿದ ಹೈಕೋರ್ಟ್

Update: 2021-02-21 16:12 GMT

ಬೆಂಗಳೂರು, ಫೆ. 21: ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದ ಸರಕಾರದ ಕ್ರಮ ಪ್ರಶ್ನಿಸಿ ನಗರದ ಮದ್ಯದಂಗಡಿಯೊಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಮಾಡಲು ಅನುಮತಿಸುವಂತೆ ಸರಕಾರಕ್ಕೆ ನಿರ್ದೇಶಿಸಲು ಕೋರಿ ನಗರದ ಎಚ್‍ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅಬಕಾರಿ ಕಾಯ್ದೆ ನಿಯಮಗಳ ಪ್ರಕಾರ ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಬಾರ್ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

ಪ್ರಕರಣವೇನು: ಚೆನ್ನೈ ಮೂಲದ ಎಚ್‍ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರಿನ ಎಚ್‍ಆರ್‍ಬಿಆರ್ ಲೇಔಟ್‍ನಲ್ಲಿ ತನ್ನ ಬ್ರಾಂಚ್ ಹೊಂದಿದ್ದು, 2017ರ ಆ.1ರಂದು ರಾಜ್ಯ ಸರಕಾರದಿಂದ ಸಿದ್ದ ಆಹಾರ ಹಾಗೂ ಪಾನೀಯಗಳ ಜತೆಗೆ ಕಡಿಮೆ ಆಲ್ಕೊಹಾಲ್ ಹೊಂದಿರುವ ಬಿಯರ್, ವೈನ್ ನಂತಹ ದೇಶಿ ಮತ್ತು ವಿದೇಶಿ ಮದ್ಯಗಳ ಆನ್ ಲೈನ್ ಮಾರಾಟಕ್ಕೂ ಕೆಲ ನಿಬಂಧನೆಗಳ ಮೇರೆಗೆ ಅನುಮತಿ ಪಡೆದುಕೊಂಡಿತ್ತು.

ಇತ್ತೀಚೆಗೆ ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಮಾಡುವ ಸರಕಾರದ ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಬಕಾರಿ ಆಯುಕ್ತರು ಬಾರ್ ಗೆ ನೀಡಿದ್ದ ಅನುಮತಿ ಹಿಂಪಡೆದಿದ್ದರು. ಅನುಮತಿ ಹಿಂಪಡೆದ ಹಿನ್ನೆಲೆಯಲ್ಲಿ ಸರಕಾರದ ಕ್ರಮ ಪ್ರಶ್ನಿಸಿ ಬಾರ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎಸ್. ಸುಜಾತ ಅವರಿದ್ದ ಪೀಠ 2019ರ ಸೆ.18ರಂದು ಮನವಿ ವಜಾಗೊಳಿಸಿತ್ತು.

ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಚ್‍ಐಪಿಬಾರ್ 2019ರ ಅ.10 ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ, ಸತೀಶ್ ಚಂದ್ರ ಶರ್ಮ ಹಾಗೂ ನ್ಯಾ. ವಿ. ಶ್ರೀಶಾನಂದ ಅವರಿದ್ದ ವಿಭಾಗೀಯ ಪೀಠ, ಅಬಕಾರಿ ಕಾಯ್ದೆ ನಿಯಮಗಳ ಅನ್ವಯ ಮದ್ಯವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ ಎಂದು ತೀರ್ಪು ನೀಡಿ, ಬಾರ್ ಮನವಿಯನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News