ಕೋವಿಡ್ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

Update: 2021-02-22 03:50 GMT

ಮುಂಬೈ: ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ರಾಜ್ಯದ ಬಾಗಿಲು ಬಡಿಯುತ್ತಿದ್ದು, ರಾಜ್ಯದಲ್ಲಿ ಜನ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾಡಿದ ಟೆಲಿವಿಷನ್ ಭಾಷಣದಲ್ಲಿ, ಎಲ್ಲ ಬಗೆಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳನ್ನು ಇಂದಿನಿಂದಲೇ ನಿಷೇಧಿಸಿರುವುದಾಗಿ ಘೋಷಿಸಿದರು. ಆದರೆ ಎಂಟು ದಿನಗಳ ಕಾಲ ಪರಿಸ್ಥಿತಿ ನೋಡಿಕೊಂಡು ಸಂಪೂರ್ಣ ಲಾಕ್‌ಡೌನ್ ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಅಗತ್ಯ ಬಿದ್ದರೆ ಸ್ಥಳೀಯ ಸಂಸ್ಥೆಗಳು ಆಯಾ ಕ್ಷೇತ್ರಕ್ಕೆ ಸೀಮಿತವಾಗುವಂತೆ ಲಾಕ್‌ಡೌನ್ ವಿಧಿಸಬಹುದು ಎಂದು ಸ್ಪಷ್ಟಪಡಿಸಿದರು.

"ಈಗ ಹೆಚ್ಚುತ್ತಿರುವ ಪ್ರಕರಣಗಳು ಎರಡನೇ ಅಲೆಯೇ ಎನ್ನುವುದು ಮುಂದಿನ 8-15 ದಿನಗಳಲ್ಲಿ ಸ್ಪಷ್ಟವಾಗಲಿದೆ. ಕಳಪೆ ಆರೋಗ್ಯ ಮೂಲಸೌಕರ್ಯದಿಂದಾಗಿ ಮೊದಲ ಅಲೆಯ ವೇಳೆ ನಾವು ಸಾಕಷ್ಟು ಯಾತನೆ ಅನುಭವಿಸಿದ್ದೇವೆ. ಮತ್ತೆ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟವನ್ನು ತಲುಪಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ರಾಜ್ಯಕ್ಕೆ ಎರಡನೇ ಅಲೆ ಅಪ್ಪಳಿಸಿದರೆ ಅದರ ತೀವ್ರತೆ ಬಗ್ಗೆ ಭೀತಿ ಇದೆ" ಎಂದು 40 ನಿಮಿಷಗಳ ಭಾಷಣದಲ್ಲಿ ವಿವರಿಸಿದರು.

ಎರಡನೇ ಲಾಕ್‌ಡೌನ್ ವಿಧಿಸುವ ವಿಚಾರವನ್ನು ಮಹಾರಾಷ್ಟ್ರದ ಜನತೆಗೆ ಬಿಡುತ್ತೇನೆ ಎಂದು ಠಾಕ್ರೆ ಹೇಳಿದರು.

"ಮತ್ತೆ ನಿರ್ಬಂಧಗಳನ್ನು ಹೇರಬೇಕೇ ಎನ್ನುವುದನ್ನು ನಿಮಗೆ ಕೇಳುತ್ತಿದ್ದೇನೆ. ಸರಳ ಮಂತ್ರವೆಂದರೆ ಮಾಸ್ಕ್ ಧರಿಸುವುದು; ಶಿಸ್ತುಪಾಲಿಸುವುದು ಮತ್ತು ಲಾಕ್‌ಡೌನ್ ಹೇರಿಕೆಯಾಗದಂತೆ ನೋಡಿಕೊಳ್ಳುವುದು. ಮುಂದಿನ ಎಂಟು ದಿನಗಳಲ್ಲಿ ಮತ್ತೆ ಪರಿಸ್ಥಿತಿ ಅವಲೋಕಿಸಿ ಲಾಕ್‌ಡೌನ್ ಬಗ್ಗೆ ನಿರ್ಧರಿಸುತ್ತೇವೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News