ಪ್ರತಿಭಟನೆಗೆ ಜನ ಸೇರಿದ ಮಾತ್ರಕ್ಕೆ ಕೃಷಿ ಕಾನೂನು ರದ್ದತಿ ಇಲ್ಲ: ಕೃಷಿ ಸಚಿವ ತೋಮರ್

Update: 2021-02-22 15:22 GMT

ಗ್ವಾಲಿಯರ್: ಕೇಂದ್ರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧ; ಆದರೆ ಕೇವಲ ಪ್ರತಿಭಟನೆಗೆ ಜನ ಸೇರಿಸಿದ ಮಾತ್ರಕ್ಕೆ ಕಾಯ್ದೆಗಳನ್ನು ರದ್ದುಪಡಿಸುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.

ಹೊಸ ಕೃಷಿ ಕಾಯ್ದೆಯ ಯಾವ ವಿಧಿ ರೈತವಿರೋಧಿ ಎಂದು ಕಾಣಿಸುತ್ತಿದೆ ಎನ್ನುವುದನ್ನು ಪ್ರತಿಭಟನಾ ಮುಖಂಡರು ಕೇಂದ್ರ ಸರ್ಕಾರಕ್ಕೆ ತೋರಿಸಿಕೊಡಲಿ ಎಂದು ಅವರು ಆಗ್ರಹಿಸಿದರು.

"ಈ ವಿಷಯದ ಸೂಕ್ಮತೆ ಹಿನ್ನೆಲೆಯಲ್ಲಿ ಸರ್ಕಾರ ರೈತ ಮುಖಂಡರ ಜತೆ 12 ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ಕೃಷಿ ಕಾಯ್ದೆಯ ಅಂಶಗಳ ಬಗ್ಗೆ ಆಕ್ಷೇಪಗಳನ್ನು ಪಟ್ಟಿ ಮಾಡಿ ತಿಳಿಸಿದಾಗ ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯ" ಎಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದರು. ಹೊಸ ಕಾನೂನಿನಲ್ಲಿ ರೈತ ವಿರೋಧಿ ಅಂಶ ಯಾವುದು ಎನ್ನುವುದನ್ನು ಸಂಘಟನೆಗಳು ತಿಳಿಸಲಿ ಎಂದು ಸವಾಲು ಹಾಕಿದರು.

"ನೀವು ಸಾರಾಸಗಟಾಗಿ ಕಾನೂನು ರದ್ದುಪಡಿಸಿ ಎಂದು ಕೇಳುತ್ತಿದ್ದೀರಿ. ಪ್ರತಿಭಟನಾಕಾರರು ಜಮಾಯಿಸಿದ ಮಾತ್ರಕ್ಕೆ ಇದು ಸಾಧ್ಯವಿಲ್ಲ ಹಾಗೂ ಹೊಸ ಕಾನೂನು ರದ್ದಾಗುವುದಿಲ್ಲ" ಎಂದು ಹೇಳಿದರು. ಈ ಅಂಶ ರೈತ ವಿರೋಧಿ ಎನ್ನುವುದನ್ನು ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದರೆ ಇಂದಿಗೂ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಸ್ವತಃ ಇದನ್ನು ತಮಗೆ ಹೇಳಿದ್ದಾಗಿ ತೋಮರ್ ವಿವರಿಸಿದರು.

"ಪ್ರತಿಭಟನಾಕಾರರು ರೈತರ ಹಿತೈಷಿಗಳಾಗಿದ್ದರೆ ಕಾನೂನಿನ ಇಂಥ ವಿಧಿ ರೈತವಿರೋಧಿ ಹಾಗೂ ಸಮಸ್ಯೆ ಸೃಷ್ಟಿಸುವಂಥದ್ದು ಎನ್ನುವುದನ್ನು ಸರ್ಕಾರಕ್ಕೆ ವಿವರಿಸಲಿ" ಎಂದು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News