ಕೋವಿಡ್ ನಿಯಮದಿಂದ ಕೊಡಗು ಗಡಿಯಲ್ಲಿ ಗೊಂದಲ: ಸಾಲುಗಟ್ಟಿ ನಿಂತ ವಾಹನಗಳು, ಪ್ರಯಾಣಿಕರ ಪರದಾಟ

Update: 2021-02-22 16:48 GMT

ಮಡಿಕೇರಿ, ಫೆ.22: ಕೇರಳ ರಾಜ್ಯದಲ್ಲಿ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕೆಂದು ಜಿಲ್ಲಾಡಳಿತ ಆದೇಶಿಸಿದೆ. ಈ ಆದೇಶದಿಂದ ಗೊಂದಲ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಮಾಕುಟ್ಟ ಚೆಕ್‍ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತವು. ಪ್ರಯಾಣಿಕರು ಹಾಗೂ ವಾಹನ ಚಾಲಕರುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಜಿಲ್ಲಾಡಳಿತ ಆದೇಶ ಹೊರಡಿಸಿದ ಪರಿಣಾಮ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಚೆಕ್‍ಪೋಸ್ಟ್ ನಲ್ಲಿ ಗೇಟ್ ಬಂದ್ ಮಾಡಿ ಕೇರಳದಿಂದ ಬರುವವರನ್ನು ತಪಾಸಣೆಗೆ ಒಳಪಡಿಸಿದರು. ಆದರೆ ಮಾಹಿತಿಯ ಕೊರತೆಯಿಂದ ಬಹುತೇಕರು ಕೋವಿಡ್ ನೆಗೆಟಿವ್ ವರದಿಯಿಲ್ಲದೆ ಬಂದಿದ್ದರು.
ಗಡಿ ಮೂಲಕ ಸಂಚಾರ ಮಾಡುವ ಲಾರಿಗಳು, ಕೇರಳ ರಾಜ್ಯದ ಖಾಸಗಿ, ಸರ್ಕಾರಿ ಬಸ್ಸುಗಳು, ಸರಕು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ನೆಗೆಟಿವ್ ವರದಿ ಇಲ್ಲದೆ ಕೊಡಗು ಜಿಲ್ಲೆಯನ್ನು ಪ್ರವೇಶಿಸುವಂತ್ತಿಲ್ಲವೆಂದು ಅಧಿಕಾರಿಗಳು ತಿಳಿಸಿದ ಕಾರಣ ಕೇರಳ ರಾಜ್ಯದ ಬಸ್ಸುಗಳು ಗಡಿಭಾಗವಾದ ಕೂಟುಪೊಳೆ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ಮರಳಿದವು. 

ಇತ್ತ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಬೇಕಿದ್ದ ಕರ್ನಾಟಕ ರಾಜ್ಯದ ಸರ್ಕಾರಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಚೆಕ್‍ಪೋಸ್ಟ್ ನಿಂದ ವಾಪಾಸ್ಸಾದವು. ಕೆಲವು ಖಾಸಗಿ ವಾಹನಗಳು ಇರ್ಟಿ, ತಲಚೇರಿ ಮಾರ್ಗವಾಗಿ ಮಾನಂದಾವಾಡಿ, ಬಾವಲಿಯಾಗಿ ಸಾಗಿದವು. ಸುಮಾರು 60 ರಿಂದ 80 ಕಿ.ಮೀ ಹೆಚ್ಚುವರಿಯಾಗಿ ಸಾಗಬೇಕಾಯಿತು. ನಿತ್ಯ ಬಳಕೆಯ ವಸ್ತುಗಳನ್ನು ಸಾಗಾಟ ಮಾಡುವವರಿಗೆ ವಿನಾಯಿತಿ ನೀಡಬೇಕೆಂದು ಸರಕು ವಾಹನಗಳ ಚಾಲಕರು ಮನವಿ ಮಾಡಿಕೊಂಡರು.

ವಿರಾಜಪೇಟೆ ಪ.ಪಂ ಸದಸ್ಯರುಗಳಾದ ಮಹಮ್ಮದ್ ರಾಫಿ, ಸಿ.ಕೆ.ಪ್ರಥ್ವಿನಾಥ್, ಜೆಡಿಎಸ್ ಪ್ರಮುಖ ಹೆಚ್.ಎಸ್.ಮತೀನ್, ಕಾಂಗ್ರೆಸ್ ಪ್ರಮುಖ ಸಿ.ಎ.ನಾಸಿರ್, ಸಲೀಂ, ಪೆಟ್ರಿಕ್ ಡಿಸೋಜ, ಶಬೀರ್ ಮತ್ತಿತರರು ಸ್ಥಳದಲ್ಲಿ ಹಾಜರಿದ್ದು, ಅಧಿಕಾರಿಗಳ ಮನವೊಲಿಸುವ ಪ್ರಯತ್ನ ಮಾಡಿದರು.

ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ಈ ರೀತಿಯ ಅರ್ಥಹೀನ ಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲ. ದಿಢೀರ್ ಆಗಿ ಗೇಟ್‍ಗಳನ್ನು ಬಂದ್ ಮಾಡುವುದರಿಂದ ಪ್ರಯಾಣಿಕರಿಗೆ ಹಾಗೂ ಸರಕು ಸಾಗಾಟಕ್ಕೆ ತೀವ್ರ ಅಡಚಣೆಯಾಗುತ್ತದೆ ಎಂದು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೇರಳದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕೆಂದು ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಪ್ರಚಾರ ನೀಡಿ ನಂತರ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಕೊಡಗು ಜಿಲ್ಲಾಡಳಿತದ ಆದೇಶ ಇಲ್ಲಿನವರಿಗೆ ಮಾತ್ರ ತಿಳಿದಿದೆಯೇ ಹೊರತು ಕೇರಳದಲ್ಲಿರುವವರಿಗೆ ತಿಳಿದಿಲ್ಲವೆಂದು ಅಭಿಪ್ರಾಯಪಟ್ಟರು.

ಚೆಕ್ ಪೋಸ್ಟ್ ಗಳಲ್ಲೇ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಪ್ರಮುಖರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News