ಮೋದಿ ಸರಕಾರದ ಪೆಟ್ರೋಲಿಯಂ ನೀತಿಗಳೂ.... ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಪರಾವಲಂಬನೆಯೂ..

Update: 2021-02-24 05:15 GMT


ಮೋದಿ ಸರಕಾರ ಹಿಂದಿನ ಸರಕಾರಗಳಿಗಿಂತ ಹೆಚ್ಚು ದೇಶಭಕ್ತ ಸರಕಾರವಲ್ಲವೇ? ಹಾಗಿದ್ದಲ್ಲಿ, ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರ ಹೊಸ ನಿಕ್ಷೇಪದ ಅನ್ವೇಷಣೆ ಮತ್ತು ಉತ್ಪಾದನೆಗೆ ಸರಕಾರಿ ಕಂಪೆನಿಗಳಿಗೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸಿ ದೇಶವನ್ನು ಆತ್ಮನಿರ್ಭರಗೊಳಿಸಬೇಕಿತ್ತಲ್ಲವೇ?

ಆದರೆ ಮೋದಿ ಸರಕಾರ ಸರಕಾರಿ ಕಂಪೆನಿಗಳಿಗೆ ಹೆಚ್ಚು ಸಂಪನ್ಮೂಲ ಒದಗಿಸುವುದಿರಲಿ, ಕಳೆದ 3-4 ವರ್ಷಗಳಿಂದ ಹಿಂದಿನ ಸರಕಾರಗಳಿಗಿಂತ ಕಡಿಮೆ ಮಾಡಿದೆ. ಉದಾಹರಣೆಗೆ 2017-18ರಲ್ಲಿ ಹೊಸ ನಿಕ್ಷೇಪಗಳ ಅನ್ವೇಷಣೆ ಮತ್ತು ಉತ್ಪಾದನೆಗಳಿಗೆ ಸರಕಾರವು ರೂ. 1.32 ಲಕ್ಷ ಕೋಟಿಗಳನ್ನು ಒದಗಿಸಿದ್ದರೆ 2018-19ರ ಸಾಲಿನಲ್ಲಿ ಅದನ್ನು ಕೇವಲ 90 ಸಾವಿರ ಕೋಟಿಗಿಳಿಸಿದೆ. ಅಂದರೆ ಶೇ. 36ರಷ್ಟು ಕಡಿತ!

ಹೆಚ್ಚುತ್ತಲೇ ಇರುವ ಪೆಟ್ರೋಲ್ ಬೆಲೆ ಏರಿಕೆಯನ್ನು ಯಾವ ರೀತಿಯಿಂದಲೂ ಸಮರ್ಥಿಸಿಕೊಳ್ಳಲಾಗದ ಮೋದಿ ಸರಕಾರ ಈಗ ಮತ್ತೆ ಎಲ್ಲಕ್ಕೂ ಕಾಂಗ್ರೆಸ್ ಕಾರಣವೆನ್ನುವ ವಾಟ್‌ಎಬೌಟ್ರಿಗೆ ಮರಳಿದೆ. ಜೊತೆಗೆ ಹತ್ತು ಹಲವು ಸುಳ್ಳುಗಳ ಗುರಾಣಿಯ ಮೂಲಕ ತಮ್ಮ ಅಬದ್ಧವನ್ನು ಸಮರ್ಥಿಸಿಕೊಳ್ಳುತ್ತಿದೆ.

ಇದರ ನಡುವೆ, ಪ್ರಧಾನಿ ಮೋದಿಯವರು ದೇಶವನ್ನು ಸುಡುತ್ತಿರುವ ಈ ವಿಷಯದ ಬಗ್ಗೆ ಮೊತ್ತ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ. ಮೊನ್ನೆ ಪೆಟ್ರೋಲ್ ಬೆಲೆ ಲೀಟರಿಗೆ ನೂರು ರೂ. ದಾಟಿದ ಚಾರಿತ್ರಿಕ ದಿನದಂದು ತಮಿಳುನಾಡಿನಲ್ಲಿ ತೈಲ ಹಾಗೂ ಅನಿಲ ಯೋಜನೆಗಳನ್ನು ಉದ್ಘಾಟಿಸುತ್ತಾ ಪ್ರಧಾನಿ ಮೋದಿಯವರು ತಾನು: ‘‘ಯಾರನ್ನೂ ಟೀಕಿಸಲು ಬಯಸುವುದಿಲ್ಲವಾದರೂ, ಸ್ವದೇಶಿ ತೈಲದ ಉತ್ಪಾದನೆಯ ಹೆಚ್ಚಳದ ಬಗ್ಗೆ ನಾವು ಈ ಹಿಂದೆಯೇ ಗಮನ ಕೊಟ್ಟಿದ್ದರೆ, ನಮ್ಮ ಮಧ್ಯಮವರ್ಗಕ್ಕೆ ಇಂತಹ ಹೊರೆ ತಗಲುತ್ತಿರಲಿಲ್ಲ’’ ಎಂದು ಮಾಮೂಲಿ ವಾಟ್‌ಎಬೌಟ್ರಿ-ಅವರು ಮಾಡಿರಲಿಲ್ಲವೇ- ಎಂಬ ವರಸೆಯಲ್ಲಿ ಮಾತನಾಡಿದ್ದಾರೆ. ಪ್ರಧಾನಿಯ ಹೇಳಿಕೆಗೆ ಎರಡು ತಾತ್ಪರ್ಯಗಳಿವೆ: 1) ಇಂದು ಪೆಟ್ರೋಲಿಯಂ ಬೆಲೆ ಗಗನ ಮುಟ್ಟುತ್ತಿರುವುದಕ್ಕೆ ಕಾರಣ ನಮ್ಮ ತೈಲ ಅಗತ್ಯಗಳನ್ನು ದೇಶೀಯವಾಗಿ ನಾವು ಉತ್ಪಾದಿಸುವ ಸಾಮರ್ಥ್ಯವಿಲ್ಲದಿರುವುದು. ಅರ್ಥಾತ್ ತೈಲದ ಆಮದಿನ ಮೇಲೆ ಅವಲಂಬಿಸಿರುವುದು. ಅಂದರೆ ಇವತ್ತು ಏರುತ್ತಿರುವ ಪೆಟ್ರೋಲ್ ಬೆಲೆ ಏರಿಕೆಗೆ ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾತೈಲದ ಬೆಲೆ ಹೆಚ್ಚುತ್ತಿರುವುದು ಕಾರಣ. ಅದರ ನಿಯಂತ್ರಣ ಭಾರತ ಸರಕಾರದ ಕೈಯಲ್ಲಿ ಇರದಿರುವುದರಿಂದ ಹಾಲಿ ಬೆಲೆ ಏರಿಕೆಗೆ ಕಾರಣ ಮೋದಿ ಸರಕಾರವಲ್ಲ ಎಂಬುದು ಮೊದಲನೆಯ ಸುಳ್ಳು.

2) ಒಂದು ವೇಳೆ ಹಿಂದಿನ ಸರಕಾರಗಳು ದೇಶಿ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿರುತ್ತಿದ್ದರೆ ಇಂದು ಈ ಕಷ್ಟ ಬರುತ್ತಿರಲಿಲ್ಲ. ಅರ್ಥಾತ್ ಇಂದಿನ ಬೆಲೆ ಏರಿಕೆಗೆ ಹಿಂದಿನ ಸರಕಾರಗಳು ಕಾರಣ. ಆದರೆ ತಮ್ಮ ಸರಕಾರ ಈಗ ದೇಶಿ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಅವರು ಭಾಷಣದಲ್ಲಿ ಯಾವ ಎಗ್ಗೂ ಇಲ್ಲದೆ ಹೇಳಿದ್ದಾರೆ. ಆದರೆ ಇವೆರಡೂ ಸುಳ್ಳುಗಳು ಮಾತ್ರವಲ್ಲ.. ಜನರ ಸುಡುಕಷ್ಟಗಳನ್ನು ರಾಜಕೀಯದ ಉರುವಲನ್ನಾಗಿ ಮಾಡಿಕೊಳ್ಳುವ ದುಷ್ಟತನವೂ ಆಗಿದೆ. ಪೆಟ್ರೋಲ್ ಬೆಲೆಗಿಂತ ಎರಡು ಪಟ್ಟು ಹೆಚ್ಚಿರುವ ಮೋದಿ ತೆರಿಗೆ

ಇದರಲ್ಲಿ ಮೊದಲನೆಯ ಸುಳ್ಳನ್ನು ಬಯಲು ಮಾಡುತ್ತಾ ಸಾಕಷ್ಟು ಚರ್ಚೆಗಳು ನಡೆದಿವೆ. ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವುದು ಕಾರಣವಲ್ಲ. ವಾಸ್ತವವಾಗಿ ಅಂತರ್‌ರಾಷ್ಟ್ರೀಯ ಕಚ್ಚಾ ತೈಲದ ಬೆಲೆಯು ಕಳೆದ ಒಂದು ವರ್ಷದಲ್ಲಿ ಬ್ಯಾರೆಲ್‌ಗೆ 60 ಡಾಲರಿನಿಂದ 54 ಡಾಲರಿಗೆ ಇಳಿದಿದೆ. ಹಾಗೆ ನೋಡಿದರೆ ಗ್ರಾಹಕರು ಪೆಟ್ರೋಲ್-ಡೀಸೆಲ್‌ಗೆ ತೆರುತ್ತಿರುವ 100ರೂ. ನಲ್ಲಿ 30 ರೂ. ಮಾತ್ರ ತೈಲದ ಬೆಲೆ. ಇನ್ನು 32 ರೂ. ಕೇಂದ್ರದ ತೆರಿಗೆ. 28 ರೂ. ರಾಜ್ಯದ ತೆರಿಗೆ. ಇನ್ನು 5-6 ರೂ. ಡೀಲರ್ ಕಮಿಷನ್ ಇತ್ಯಾದಿ. 2013ರಲ್ಲಿ ಒಂದು ಬ್ಯಾರೆಲ್ (160 ಲೀಟರ್) ಕಚ್ಚಾ ತೈಲದ ಬೆಲೆ 75 ಡಾಲರಿದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ 75ರೂ. ದಾಟಿರಲಿಲ್ಲ. ಏಕೆಂದರೆ ಆಗ ಕೇಂದ್ರ ತೆರಿಗೆ 10ರೂ. ಗಿಂತ ಕಡಿಮೆ ಇತ್ತು.

ಆದರೆ ನಾವು ಬೆಲೆ ಹೆಚ್ಚು ತೆರುತ್ತಿರಲು ಕಾರಣ ಕೇಂದ್ರ ವಿಧಿಸುತ್ತಿರುವ ಅಲ್ಲ ಸುಲಿಯುತ್ತಿರುವ ತೆರಿಗೆ ಕಾರಣವೇ ಹೊರತು ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ದರವಲ್ಲ.

ಈ ವಿಷಯದಲ್ಲಿ ಮೋದಿಯವರು ಇತಿಹಾಸದಲ್ಲಿ ಆಗಿಹೋದ ಸುಳ್ಳುಗಾರರ ಜೊತೆ ಯಶಸ್ವೀ ಪೈಪೋಟಿ ನಡೆಸುತ್ತಿದ್ದಾರೆಂಬುದು ಬಯಲಾಗಿದೆ.

ಆದರೆ ಪ್ರಧಾನಿ ಮೋದಿಯವರು ಹೇಳುತ್ತಿರುವ ಮತ್ತೊಂದು ಬಿಳಿಸುಳ್ಳಿನ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿಲ್ಲ. ಮೋದಿ ಸರಕಾರದಲ್ಲಿ ವಿದೇಶಿ ತೈಲದ ಆಮದು ಹೆಚ್ಚಾಗಿರುವುದೇಕೆ?

ಭಾರತ ಸರಕಾರದ ಪೆಟ್ರೋಲಿಯಂ ಇಲಾಖೆಯ ನೇರ ಸುಫರ್ದಿಯಲ್ಲಿ ಕೆಲಸ ಮಾಡುವ Petroleum Pricing and Analysis Cell –PPAC- ಯು 2021ರ ಜನವರಿಯಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ 2019-20ರ ಸಾಲಿನಲ್ಲಿ ನಮ್ಮ ದೇಶಕ್ಕೆ ಅಗತ್ಯವಾಗಿರುವ ಪೆಟ್ರೋಲಿಯಂ ಕಚ್ಚ್ಚಾ ತೈಲದ ಶೇ. 85ರಷ್ಟು ಪ್ರಮಾಣವನ್ನು ಮೋದಿ ಸರಕಾರ ಆಮದು ಮಾಡಿಕೊಳ್ಳುತ್ತಿತ್ತು. ಅದರಲ್ಲಿ ಹಿಂದಿನ ಸರಕಾರಗಳಂತೆ ಮೋದಿ ಸರಕಾರವೂ ಶೇ. 61ರಷ್ಟು ಇರಾಕ್, ಸೌದಿ ಅರೇಬಿಯ, ಇರಾನ್‌ಗಳಿಂದ ಶೇ. 15 ರಷ್ಟು ದಕ್ಷಿಣ ಆಫ್ರಿಕಾದಿಂದ ಹಾಗೂ ಶೇ. 10ರಷ್ಟು ಲ್ಯಾಟಿನ್ ಅಮೆರಿಕ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರ ಜೊತೆಗೆ ಶೇ. 10ರಷ್ಟನ್ನು ಹೆಚ್ಚಿನ ದರಕ್ಕೆ ಅಮೆರಿಕದಿಂದ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ!

(https://www.ppac.gov.in/WriteReadData/Reports/202102190444572101992SnapshotofIndia'sOilGasdata,January2021.pdf)

ಆದರೆ ಇದೇ ವರದಿ ಹೇಳುವ ಮತ್ತೊಂದು ಸತ್ಯವೆಂದರೆ, ಕಚ್ಚಾ ತೈಲದ ಆಮದು ಪ್ರಮಾಣ 2012ರಲ್ಲಿ ಅಂದರೆ ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಭಾರತವು ಶೇ. 78.3ರಷ್ಟು ತೈಲವನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿತ್ತು! ಅಂದರೆ ಮೋದಿ ಸರಕಾರದ ಅಂಕಿಅಂಶಗಳೇ ಹೇಳುವಂತೆ, ಮೋದಿ ಸರಕಾರವು ಈ ಹಿಂದಿನ ಸರಕಾರಗಳಿಗಿಂತ ಶೇ. 6.7 ರಷ್ಟು ಹೆಚ್ಚಿನ ತೈಲವನ್ನು ಹೆಚ್ಚಿನ ರೊಕ್ಕ ಕೊಟ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಅದಕ್ಕೆ ಮಾತಿನ ಕಠಾರಿ ವೀರ ಪ್ರಧಾನಿಯವರ ಬಳಿ ಮತ್ತೊಂದು ರೆಡಿಮೇಡ್ ಉತ್ತರವಿರಲು ಸಾಧ್ಯ. ದೇಶವು ಒಂದೇ ಸಮನೆ ಅಭಿವೃದ್ಧಿ ಹೊಂದುತ್ತಿರುವುದರಿಂದ ಇಂಧನದ ಅಗತ್ಯವಿದೆ. ಕಾಂಗ್ರೆಸ್ ಕಾರಣದಿಂದ ದೇಶಿ ತೈಲವು ಸಾಕಷ್ಟು ಇಲ್ಲವಾದ್ದರಿಂದ ಅನಿವಾರ್ಯವಾಗಿ ಅಭಿವೃದ್ಧಿಗಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಕಾಂಗ್ರೆಸ್ ಬಗ್ಗೆ ಬಿಜೆಪಿಯ ಆರೋಪವೂ ಇದೇ ಆಗಿತ್ತಲ್ಲವೇ? ಕಾಂಗ್ರೆಸ್ ಸರಕಾರಗಳು ತಕ್ಷಣದ ಅಭಿವೃದ್ಧಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶಿ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಯಾವ ಉಪಕ್ರಮಗಳನ್ನೂ ತೆಗೆದುಕೊಳ್ಳದೆ ದೇಶವನ್ನು ತೈಲಾವಲಂಬಿಯಾಗಿಯೇ ಉಳಿಸಿಬಿಟ್ಟವು ಎಂಬುದೇ ಕಾಂಗ್ರೆಸ್ ಮೇಲಿರುವ ಆರೋಪವಲ್ಲವೇ?

ಆದರೆ ಆತ್ಮನಿರ್ಭರ, ಸ್ವದೇಶೀ, ದೇಶಭಕ್ತ ಮೋದಿ ಸರಕಾರ ಅಧಿಕಾರಕ್ಕೆ ಬಂದು ಈಗಲೇ ಆರು ವರ್ಷಗಳಾಯಿತಲ್ಲ. ತೈಲ ಸ್ವಾವಲಂಬಿಯಾಗಲು ಮೋದಿ ಸರಕಾರ ಏನು ಕ್ರಮಗಳನ್ನು ತೆಗೆದುಕೊಂಡಿದೆ? ಅದು ಬಿಡಿ..ಕಾಂಗ್ರೆಸ್ ಸರಕಾರಗಳ ಕಾಲದಲ್ಲಿ ಸ್ವಾವಲಂಬಿಯಾಗಲು ಕೈಗೊಂಡ ಅರೆಬರೆ ಯೋಜನೆಗಳಿಗೆ ಎಷ್ಟು ಕಸುವು ತುಂಬಿದೆ?

ಇದಕ್ಕೆ ಸಂಬಂಧಪಟ್ಟಂತೆ, ಕೇಂದ್ರ ಸರಕಾರದ ಅಧಿಕೃತ ಆರ್ಥಿಕ ನೀತಿ ಸಮಾಲೋಚಕರಾದ ನೀತಿ ಆಯೋಗವು ಅಂತರ್‌ರಾಷ್ಟ್ರೀಯ ಇಂಧನ ಏಜೆನ್ಸಿ –(IEA)-  ಜೊತೆಗೂಡಿ 2020ರಲ್ಲಿ ಭಾರತದ ಇಂಧನ ನೀತಿಯ ಬಗ್ಗೆ ಆಳವಾದ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಸರಕಾರಿ ತೈಲ ಕಂಪೆನಿಗಳ ಕಗ್ಗೊಲೆ-ವಿದೇಶಿ ಹರಾಜಿಗೆ ಭಾರತದ ತೈಲ

 ಆ ವರದಿಯ ಪ್ರಕಾರ ಭಾರತದ 26 ತೈಲ ಬಯಲು ಪ್ರದೇಶಗಳಲ್ಲಿ 47.8 ಶತಕೋಟಿ ಟನ್‌ನಷ್ಟು ತೈಲ ನಿಕ್ಷೇಪಗಳಿವೆಯೆಂದು ಅಂದಾಜು ಮಾಡಲಾಗಿದೆ. ಅದರಲ್ಲಿ 4.4 ಶತಕೋಟಿ ಬ್ಯಾರೆಲ್‌ಗಳಷ್ಟು ತೈಲ ನಿಕ್ಷೇಪಗಳು ಖಚಿತವಾಗಿ ಗುರುತಿಸಲಾಗಿದ್ದು ಅದು ಭಾರತದ 14 ವರ್ಷಗಳಷ್ಟು ತೈಲ ಅಗತ್ಯವನ್ನೂ ಪೂರೈಸಬಲ್ಲದು. ಇದರಲ್ಲಿ ಶೇ. 96ರಷ್ಟು ನಿಕ್ಷೇಪಗಳು ರಾಜಸ್ಥಾನ್, ಗುಜರಾತ್ ಮತ್ತು ಅಸ್ಸಾಮ್ ಸಾಗರ ಹಾಗೂ ತೈಲ ಬಯಲುಗಳಲ್ಲಿವೆ. ಈ ಬಯಲುಗಳಿಂದ ಕೇಂದ್ರ ಸರಕಾರದ ಸುಪರ್ದಿಯಲ್ಲಿರುವ ಲಾಭದಾಯಕ ಮಹಾರತ್ನ ಕಂಪೆನಿಗಳಾದ Oil and Natural Gas Company- ONGC ಮತ್ತು  Oil India Limited- OIL  ಗಳು 2012ರಲ್ಲಿ 38 ಮಿಲಿಯನ್ ಟನ್‌ಗಳಷ್ಟು ಕಚ್ಚಾ ತೈಲವನ್ನು ಸ್ಥಳೀಯವಾಗಿ ಉತ್ಪಾದಿಸುತ್ತಿತ್ತು.

ಆದರೆ ಅದು ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 38 ಮಿಲಿಯನ್ ಟನ್‌ಗಳಿಂದ 2015ರಲ್ಲಿ 32.6 ಮಿಲಿಯನ್ ಟನ್‌ಗಿಳಿಯಿತು! ಅಲ್ಲಿಂದ ಇನ್ನೂ ಕೆಳಗಿಳಿದು ಆತ್ಮನಿರ್ಭರ ಮೋದಿ ಸರಕಾರವು ಸ್ಥಳೀಯ ತೈಲ ಉತ್ಪಾದನೆಯನ್ನು 32 ಮಿಲಿಯನ್ ಟನ್‌ಗಳಿಗೆ ಇಳಿಸಿತು. ಅಂದರೆ ಈ ಹಿಂದಿನ ಸರಕಾರಗಳಿಗಿಂತ ಮೋದಿ ಸರಕಾರದಲ್ಲಿ ಸ್ವದೇಶಿ ಕಚ್ಚಾ ತೈಲ ಉತ್ಪಾದನೆಯು ಶೇ.21ರಷ್ಟು ಕುಸಿಯಿತು. ಇದೇ ರೀತಿ ಗ್ಯಾಸ್ ಉತ್ಪಾದನೆಯು 2012ರಲ್ಲಿ 48 ಶತಕೋಟಿ ಕ್ಯುಬಿಕ್ ಮೀಟರ್‌ಗಳಷ್ಟಿದ್ದದ್ದು 2020ರಲ್ಲಿ 32 ಶತಕೋಟಿ ಕ್ಯುಬಿಕ್ ಮೀಟರುಗಳಿಗಿಳಿಯಿತು. ಅಂದರೆ ಹಿಂದಿನ ಸರಕಾರಕ್ಕಿಂತ ಸ್ವದೇಶಿ ಮೋದಿ ಸರಕಾರದ ಕಾಲದಲ್ಲೇ ಶೇ. 33ರಷ್ಟು ಅವಲಂಬನೆ ಹೆಚ್ಚಾಗಿದೆ.
(https://niti.gov.in/sites/default/files/2020-01/IEA-India 2020-In-depth-EnergyPolicy_0.pdf)

ಪಾಕಿಸ್ತಾನಿ ಕುತಂತ್ರವೋ? ಮೋದಿ ಸರಕಾರದ ದೇಶದ್ರೋಹವೋ?

 ಸಾಮಾನ್ಯವಾಗಿ ಕಚ್ಚಾ ತೈಲ ಉತ್ಪಾದನೆಯು ಹೆಚ್ಚಾಗಬೇಕೆಂದರೆ ಹಳೆಯ ತೈಲ ನಿಕ್ಷೇಪಗಳು ಮುಗಿಯುತ್ತಾ ಬಂದಂತೆ ಹೊಸ ತೈಲ ನಿಕ್ಷೇಪಗಳನ್ನು ಹುಡುಕಲು ಮತ್ತು ಹೊಸ ಉತ್ಪಾದನೆ ಮಾಡಲು ತೈಲ ಕಂಪೆನಿಗಳು ತಮ್ಮ ಲಾಭದ ಒಂದು ಪಾಲನ್ನು ಹೂಡಬೇಕಾಗುತ್ತದೆ. ಭಾರತದಲ್ಲಿ ಕಳೆದೊಂದು ದಶಕದ ತನಕ ತೈಲ ಅನ್ವೆಷಣೆ, ತೈಲ ಉತ್ಪಾದನೆಯ ಬಾಬತ್ತುಗಳನ್ನು ಸರಕಾರಿ ಕಂಪೆನಿಗಳೇ ನಿರ್ವಹಿಸುತ್ತಿದ್ದವು. ಆದರೆ ಹಿಂದಿನ ಕಾಂಗ್ರೆಸ್ ಸರಕಾರವನ್ನೂ ಒಳಗೊಂಡಂತೆ ಎಲ್ಲಾ ಸರಕಾರಗಳು 1991ರಿಂದ ತೈಲ ಮತ್ತು ಅನಿಲ ಕ್ಷೇತ್ರದ ಅನ್ವೇಷಣೆ ಮತ್ತು ಉತ್ಪಾದನೆಗಳನ್ನು ಖಾಸಗೀಕರಿಸಿದವು. ಲಾಭ ಮಾಡುತ್ತಿದ್ದ ಸರಕಾರಿ ಅನಿಲ ಮತ್ತು ತೈಲ ಕಂಪೆನಿಗಳಿಗೆ ಹೊಸ ಅನ್ವೇಷಣೆ ಅಥವಾ ಉತ್ಪಾದನೆಗೆ ಅನುಮತಿಯನ್ನೂ ಮತ್ತು ಸಂಪನ್ಮೂಲಗಳನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಹೋದವು.

 ಆದರೆ ಮೋದಿ ಸರಕಾರ ಹಿಂದಿನ ಸರಕಾರಗಳಿಗಿಂತ ಹೆಚ್ಚು ದೇಶಭಕ್ತ ಸರಕಾರವಲ್ಲವೇ? ಹಾಗಿದ್ದಲ್ಲಿ, ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರ ಹೊಸ ನಿಕ್ಷೇಪದ ಅನ್ವೇಷಣೆ ಮತ್ತು ಉತ್ಪಾದನೆಗೆ ಸರಕಾರಿ ಕಂಪೆನಿಗಳಿಗೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸಿ ದೇಶವನ್ನು ಆತ್ಮನಿರ್ಭರಗೊಳಿಸಬೇಕಿತ್ತಲ್ಲವೇ?

ಆದರೆ ಮೋದಿ ಸರಕಾರ ಸರಕಾರಿ ಕಂಪೆನಿಗಳಿಗೆ ಹೆಚ್ಚು ಸಂಪನ್ಮೂಲ ಒದಗಿಸುವುದಿರಲಿ, ಕಳೆದ 3-4 ವರ್ಷಗಳಿಂದ ಹಿಂದಿನ ಸರಕಾರಗಳಿಗಿಂತ ಕಡಿಮೆ ಮಾಡಿದೆ. ಉದಾಹರಣೆಗೆ 2017-18ರಲ್ಲಿ ಹೊಸ ನಿಕ್ಷೇಪಗಳ ಅನ್ವೇಷಣೆ ಮತ್ತು ಉತ್ಪಾದನೆಗಳಿಗೆ ಸರಕಾರವು ರೂ. 1.32 ಲಕ್ಷ ಕೋಟಿಗಳನ್ನು ಒದಗಿಸಿದ್ದರೆ 2018-19ರ ಸಾಲಿನಲ್ಲಿ ಅದನ್ನು ಕೇವಲ 90 ಸಾವಿರ ಕೋಟಿಗಿಳಿಸಿದೆ. ಅಂದರೆ ಶೇ. 36ರಷ್ಟು ಕಡಿತ!

ಆದ್ದರಿಂದಲೇ, 2018-19ರ ಸಾಲಿನಲ್ಲಿ 19.6 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು (ಮಿ.ಮೆ.ಟ.) ಕಚ್ಚಾ ತೈಲ ಉತ್ಪಾದಿಸುತ್ತಿದ್ದ ಸರಕಾರಿ ONGC ಕಂಪೆನಿಯು 2019-20ರ ಸಾಲಿನಲ್ಲಿ ಹೆಚ್ಚುವರಿ ಉತ್ಪಾದನೆ ಮಾಡಿ ಆತ್ಮನಿರ್ಭರವಾಗುವುದಿರಲಿ, ಕೇವಲ 19.2 ಮಿ.ಮೆ.ಟ. ಮಾತ್ರ ಉತ್ಪಾದಿಸುವಂತಾಯಿತು. ಅದೇ ಕಾರಣಕ್ಕಾಗಿಯೇ, ಸರಕಾರಿ OIL ಕಂಪೆನಿಯು 2018-19ರ ಸಾಲಿನಲ್ಲಿ 3.3 ಮಿ.ಮೆ.ಟ.ನಷ್ಟು ಕಚ್ಚಾ ತೈಲ ಉತ್ಪಾದಿಸಿದ್ದರೆ 2019-20ರ ಸಾಲಿನಲ್ಲಿ ಕೇವಲ 3.1 ಮಿ.ಮೆ.ಟ. ಮಾತ್ರ ಉತ್ಪಾದಿಸಿತು. ಸ್ವದೇಶಿ ತೈಲ ನಿಕ್ಷೇಪಗಳ ವಿದೇಶಿ ಹರಾಜೇ ಆತ್ಮ ನಿರ್ಭರತೆಯೇ?

ಕಾರಣವಿಷ್ಟೆ. ಮೋದಿ ಸರಕಾರ ಈ ದೇಶದಲ್ಲಿರುವ ಎಲ್ಲಾ ತೈಲ ನಿಕ್ಷೇಪಗಳ ಅನ್ವೇಷಣೆ, ಉತ್ಪಾದನೆ ಮತ್ತು ಮಾರಾಟಗಳನ್ನು ಸಂಪೂರ್ಣವಾಗಿ ಖಾಸಗೀಕರಿಸುತ್ತಿದೆ. ಉದಾಹರಣೆಗೆ ಕಳೆದ ವರ್ಷ ಹರಾಜಾದ ಶೇ. 61ರಷ್ಟು ನಿಕ್ಷೇಪಗಳು ಖಾಸಗಿಯವರಿಗೆ ನೀಡಲಾಗಿದೆ. ಅವುಗಳು ಪ್ರಮುಖವಾಗಿ ವೇದಾಂತ, ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಮತ್ತು ರಿಲಯನ್ಸ್ ಕಂಪೆನಿಗಳ ಪಾಲಾಗಿವೆ. ಈ ವರ್ಷ ಬಜೆಟ್‌ನಲ್ಲಂತೂ ಇನ್ನು ಮುಂದೆ ತೈಲ- ಇಂಧನ ಕ್ಷೇತ್ರಗಳಲ್ಲಿ ಸರಕಾರೀ ವಲಯದ ಪಾಲು ಕೇವಲ ನೆಪಮಾತ್ರದ್ದಾಗಿರಲಿದೆ. ಎಲ್ಲಾ ಸರಕಾರಿ ಕಂಪೆನಿಗಳನ್ನು ಖಾಸಗೀಕರಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲ. ಈ ಕ್ಷೇತ್ರದಲ್ಲಿ ದೇಶ-ವಿದೇಶಿ ಕಂಪೆನಿಗಳನ್ನು ಇನ್ನೂ ಹೆಚ್ಚೆಚ್ಚು ಆಕರ್ಷಿಸುವ ಸಲುವಾಗಿ Hydro-carbon Exploration Licensing Policy- HELP- ಎಂಬ ಹೆಸರಿನ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ. ಇದರನ್ವಯ ಅತ್ಯುತ್ತಮವಾದ ನಿಕ್ಷೇಪಗಳಿರುವ ಯಾವುದೇ ಬ್ಲಾಕುಗಳನ್ನು ಸರಕಾರಿ ಕಂಪೆನಿಗಳಿಗಿಂತ ಖಾಸಗಿ ಕಂಪೆನಿಗಳು ನೇರವಾಗಿ ಪಡೆದುಕೊಳ್ಳಬಹುದು. ಇನ್ನು ಮುಂದೆ ಅವು ಸರಕಾರದೊಡನೆ ಲಾಭವನ್ನೂ ಹಂಚಿಕೊಳ್ಳಬೇಕಿಲ್ಲ. ತಮ್ಮ ಉತ್ಪನ್ನವನ್ನೂ ಹಂಚಿಕೊಳ್ಳಬೇಕಿಲ್ಲ. ಜೊತೆಗೆ ಅವು ಬೇಕೆಂದಲ್ಲಿ ಮಾರಾಟ ಮಾಡಿಕೊಳ್ಳುವ ಹಾಗೂ ತಮಗೆ ಬೇಕಾದ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು (ಮಾರ್ಕೆಟಿಂಗ್ ಆ್ಯಂಡ್ ಪ್ರೈಸಿಂಗ್ ಫ್ರೀಡಂ)ನ್ನು ಪಡೆದುಕೊಳ್ಳಲಿವೆ.  (https://niti.gov.in/sites/default/files/2020-01/IEA-India 2020-In-depth-EnergyPolicy_0.pdf)

ಈ ದೇಶದ್ರೋಹಿ ನೀತಿಯನ್ನು ಮೋದಿ ಸರಕಾರವು ಹಿಂದಿನ ಸರಕಾರಗಳಿಗಿಂತ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಮುಂದುವರಿಸಿರುವುದೇ ಭಾರತದ ತೈಲ ಅವಲಂಬನೆ ಹೆಚ್ಚುತ್ತಿರುವುದಕ್ಕೆ ಪ್ರಧಾನ ಕಾರಣವಾಗಿದೆ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News