ಮೊಮ್ಮಗಳ ಶಿಕ್ಷಣಕ್ಕಾಗಿ ಮನೆಯನ್ನೇ ಮಾರಿದ ವೃದ್ಧ ಆಟೋ ಚಾಲಕನಿಗೆ ಹರಿದು ಬಂತು 24 ಲಕ್ಷ ರೂ. ದೇಣಿಗೆ

Update: 2021-02-24 06:51 GMT

ಮುಂಬೈ: ತನ್ನ ಮೊಮ್ಮಗಳ ಶಿಕ್ಷಣದ ವೆಚ್ಚ ಭರಿಸುವ ಸಲುವಾಗಿ ತನ್ನ ಮನೆಯನ್ನೇ ಮಾರಾಟ ಮಾಡಿದ ಮುಂಬೈ ಆಟೋ ಚಾಲಕರೊಬ್ಬರಿಗೆ ಕ್ರೌಡ್‍ಫಂಡಿಂಗ್ ಮೂಲಕ ರೂ. 24 ಲಕ್ಷ ದೇಣಿಗೆ ಹರಿದು ಬಂದಿದೆ. ಹ್ಯೂಮನ್ಸ್ ಆಫ್ ಬಾಂಬೆ ಸಾಮಾಜಿಕ ಜಾಲತಾಣದಲ್ಲಿ ಈ ಹಿರಿಯ ಆಟೋ ಚಾಲಕ ದೇಸರಾಜ್ ಅವರ ಕಥೆಯನ್ನು ಪೋಸ್ಟ್ ಮಾಡಿತ್ತು. ಈ ಪೋಸ್ಟ್ ವೈರಲ್ ಆಗಿತ್ತು. ತಮ್ಮ  ಇಬ್ಬರು ಪುತ್ರರ ನಿಧನದ ನಂತರ ತಮ್ಮ ಇಬ್ಬರು ಸೊಸೆಯಂದಿರು ಹಾಗೂ  ನಾಲ್ಕು ಮೊಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ತಮ್ಮದಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಇದಕ್ಕಾಗಿ ಆದಷ್ಟು ಹೆಚ್ಚು ಸಮಯ ಆಟೋ ಓಡಿಸುತ್ತಿದ್ದ ಅವರು ಗಳಿಸುತ್ತಿದ್ದ ಹೆಚ್ಚಿನ ಆದಾಯ ಅವರ ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಖರ್ಚಾಗುತ್ತಿತ್ತು. ತಮ್ಮ ಮೊಮ್ಮಗಳಿಗೆ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ 80 ಅಂಕಗಳು ದೊರೆತಾಗ ತಾನು ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಅಂದುಕೊಂಡಿದ್ದಾಗಿ ಅವರು ಹೇಳಿದ್ದರು.

ಮೊಮ್ಮಗಳು ಬಿ.ಎಡ್ ಶಿಕ್ಷಣಕ್ಕಾಗಿ ದಿಲ್ಲಿಗೆ ಹೊಗಲು ಬಯಸಿದಾಗಿ ಅಷ್ಟು ಹಣವಿಲ್ಲದೆ ಕೊನೆಗೆ ಆಕೆಯ ಕನಸು ಈಡೇರಿಸಲು ಸ್ವಂತ ಮನೆಯನ್ನು ಮಾರಾಟ ಮಾಡಿದ್ದಾಗಿ ಅವರು ವಿವರಿಸಿದ್ದರು.

ಹಲವಾರು ಮಂದಿ ಅವರ ಕಥೆಯನ್ನು ಟ್ವೀಟ್ ಮಾಡಿದ್ದರಲ್ಲದೆ ಫೇಸ್ ಬುಕ್ ಬಳಕೆದಾರ ಗುಂಜನ್ ರತ್ತಿ ಎಂಬವರು ಕ್ರೌಡ್ ಫಂಡಿಂಗ್ ಆರಂಭಿಸಿದ್ದರು. ಹ್ಯೂಮನ್ಸ್ ಆಫ್ ಬಾಂಬೆ ಈ ಕುರಿತು ಮಾಹಿತಿ ನೀಡಿ ಅವರಿಗೆ ರೂ 24 ಲಕ್ಷ ಚೆಕ್ ದೊರಕಿದೆ ಎಂದು ತಿಳಿಸಿದೆ. ಅವರು ಚೆಕ್ ಪಡೆಯುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News