ಮೈಸೂರು ಮಹಾನಗರ ಪಾಲಿಕೆ : ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆ

Update: 2021-02-24 10:05 GMT
ರುಕ್ಮಿಣಿ ಮಾದೇಗೌಡ-ಅನ್ವರ್ ಬೇಗ್

ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ 36ನೇ ವಾಡ್೯ ನ  ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ 10ನೇ ವಾಡ್೯ನ ಕಾಂಗ್ರೆಸ್ ಸದಸ್ಯ ಅನ್ವರ್ ಬೇಗ್ (ಅಫ್ತಾಬ್) ಆಯ್ಕೆಯಾಗಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆದು ಎರಡು ಅವಧಿಗೆ ಜೆಡಿಎಸ್ ನವರು ಮೇಯರ್ ಆಗಿ, ಉಪಮೇಯರ್ ಆಗಿ ಕಾಂಗ್ರೆಸ್ ನವರು ಆಯ್ಕೆಯಾಗಿದ್ದರು. ಆದರೆ ಈ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದು ಬಿದ್ದಿತ್ತು.

ಆದರೆ ಈ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇಲ್ಲದಿದ್ದರೂ ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಮೇಯರ್ ಆದರೆ, ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ನ ಅನ್ವರ್ ಬೇಗ್ ( ಅಫ್ತಾಬ್) ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್ ಚುನಾವಣೆ ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ಪ್ರಾದೇಶಿಕ ಆಯುಕ್ತ ಪ್ರಕಾಶ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡೆಸಿದರು. ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಶಾಂತಕುಮಾರಿ, ಜೆಡಿಎಸ್ ನಿಂದ ರುಕ್ಮಿಣಿ ಮಾದೇಗೌಡ ನಾಮಪತ್ರ ಸಲ್ಲಿಸಿದರು.

ಒಟ್ಟು 73 ಸದಸ್ಯರ ಬಲ ಹೊಂದಿರುವ ಪಾಲಿಕೆಯಲ್ಲಿ ಅಂತಿಮವಾಗಿ ರುಕ್ಮಿಣಿ ಮಾದೇಗೌಡ ಪರ 43 ಮತಗಳು ಲಭಿಸಿದರೆ, ಬಿಜೆಪಿಯ ಸುನಂದಾ ಪಾಲನೇತ್ರ 26 ಮತಗಳನ್ನು ಪಡೆದರು, ಕಾಂಗ್ರೆಸ್ ನ ಶಾಂತಕುಮಾರಿ ಪರ ಯಾರೂ ಮತ ಚಲಾಯಿಸಲಿಲ್ಲ ಎಂದು ತಿಳಿದುಬಂದಿದೆ.

ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಅನ್ವರ್ ಬೇಗ್ ಮತ್ತು ಬಿಜೆಪಿಯ ಸಾತ್ವಿಕ್ ನಡುವೆ ಸ್ಪರ್ಧೆ ನಡೆಯಿತು. ಅಂತಿಮವಾಗಿ ಕಾಂಗ್ರೆಸ್ ಸದಸ್ಯ ಅನ್ವರ್ ಬೇಗ್ 44 ಮತ ಪಡೆದು ಉಪಮೇಯರ್ ಆಗಿ ಆಯ್ಕೆಯಾದರೆ, ಬಿಜೆಪಿಯ ಸಾತ್ವಿಕ್ 26 ಮತ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News