ಬಿಎಸ್‍ವೈ ಕುಟುಂಬದ ವಿರುದ್ಧದ ಯತ್ನಾಳ್ ಆರೋಪದಲ್ಲಿ ನ್ಯಾಯವಿದೆ: ಎಚ್.ವಿಶ್ವನಾಥ್

Update: 2021-02-24 12:03 GMT

ಬೆಂಗಳೂರು, ಫೆ. 24: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಅರೋಪದಲ್ಲಿ ನ್ಯಾಯವಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಇಂದಿಲ್ಲಿ ಸಮರ್ಥಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹಿರಿಯ ಶಾಸಕ ಯತ್ನಾಳ್ ಸಂವಿಧಾನದ ಚೌಕಟ್ಟಿನಲ್ಲೇ ಮಾತನಾಡಿದ್ದಾರೆ. ಪಕ್ಷ ಹಾಗೂ ರಾಜ್ಯ ಸರಕಾರದ ವಿರುದ್ಧ ಯತ್ನಾಳ್ ಯಾವುದೇ ಹೇಳಿಕೆ ನೀಡಿಲ್ಲ. ಜನವಿರೋಧಿ ಭಾಷಣವನ್ನು ಮಾಡಿಲ್ಲ' ಎಂದರು.

‘ಯತ್ನಾಳ್ ಅವರು ರಾಜ್ಯ ಸರಕಾರದ ರೀತಿ-ನೀತಿಗಳ ಬಗ್ಗೆ ಯತ್ನಾಳ್ ಮಾತನಾಡಿದ್ದು, ಸಿಎಂ ಕುಟುಂಬ, ಭ್ರಷ್ಟಾಚಾರದ ಬಗ್ಗೆ ಹೇಳಿದ್ದು, ಸಚಿವರ ನಡವಳಿಕೆ ಬಗ್ಗೆ ಹೇಳಿದ್ದಾರೆ. ವಿಪಕ್ಷಗಳೇ ಮೌನಕ್ಕೆ ಶರಣಾದರೆ ಇನ್ನೇನು ಮಾಡಬೇಕು' ಎಂದು ಎಚ್.ವಿಶ್ವನಾಥ್ ಟೀಕಿಸಿದರು.

‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆಂದು ಗೊತ್ತಿಲ್ಲ. ಅವರಿಬ್ಬರೂ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ತಪ್ಪುಗಳನ್ನು ಹೇಳಬೇಕಾಗುತ್ತದೆ' ಎಂದು ಹೇಳಿದರು.

ಸರಕಾರ ವಿಫಲ: ‘ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಲಿಂಗಾಯತ ಪಂಚಮಸಾಲಿ, ಕುರುಬ ಸಮುದಾಯ ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಸೇರಿದಂತೆ ವಿವಿಧ ಸಮುದಾಯಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಸರಕಾರ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೆ, ಮೀಸಲಾತಿ ವಿಚಾರವನ್ನು ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ' ಎಂದು ವಿಶ್ವನಾಥ್ ದೂರಿದರು.

‘ಎಲ್ಲ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸಲು ಸಂವಿಧಾನಾತ್ಮಕ ಅವಕಾಶವಿದೆ. ಸರಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಲ್ಲದೆ, ಅವರ ಬೇಡಿಕೆಗಳಿಗೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಬೇಕು. ಆದರೆ, ಸರಕಾರ ತಮಗೂ ಈ ವಿಚಾರಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದೆ' ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News