ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಹೋರಾಟ ತೀವ್ರಗೊಳಿಸಲು ಸಮುದಾಯದ ಮುಖಂಡರ ನಿರ್ಧಾರ

Update: 2021-02-24 12:24 GMT

ಬೆಂಗಳೂರು, ಫೆ.24: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ `2ಎ' ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳ ನೇತತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ 3ನೆ ದಿನವಾದ ಬುಧವಾರ ಕೂಡ ಮುಂದುವರಿದಿದೆ. ಹೋರಾಟವನ್ನು ತೀವ್ರಗೊಳಿಸಲು ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.

`2ಎ' ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಿ ಫೆ.21ರಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದ ಪಂಚಮಸಾಲಿ ಸಮುದಾಯದವರು ಮಾ.4ರವರೆಗೂ ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರೆಗೂ ಧರಣಿ ನಡೆಸಲು ಮುಂದಾಗಿದ್ದಾರೆ. ಈ ನಡುವೆ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ ಇಬ್ಬರು ಸಚಿವರ ವಿರುದ್ಧ ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಕಿಡಿಕಾರಿದ್ದಾರೆ.

ಪ್ರತಿಭಟನೆ ಕುರಿತು ಹೇಳಿಕೆ ನೀಡಿದ್ದ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್ ಅವರು, ಪ್ರತಿಭಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ವಿರೋಧ ಪಕ್ಷಗಳ ಧ್ವನಿಯಾಗುತ್ತಿದ್ದಾರೆಂದು ಹೇಳಿದ್ದರು.

ಬಿಜೆಪಿ ಸಚಿವರು ಆರೋಪ ಮಾಡಿರುವಂತೆ ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯವಿಲ್ಲ. ಹಕ್ಕುಗಳಿಗೆ ಆಗ್ರಹಿಸಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಹೇಳಿದ್ದಾರೆ.

ಇದು ವೈಯಕ್ತಿಕ ಹೋರಾಟವಲ್ಲ. ಮೀಸಲಾತಿ ಆಗ್ರಹಿಸಿ ನಡೆಸಲಾಗುತ್ತಿದೆ. ಪ್ರತಿಭಟನೆಗೆ ರಾಜಕೀಯ ತಿರುವು ನೀಡುತ್ತಿರುವ ಸಚಿವರ ವಿರುದ್ಧ ಇನ್ನು ಕೆಲವೇ ದಿನಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆಂದು ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ. ಮಾ. 4ರವರೆಗೂ ಇದೇ ರೀತಿ ಪ್ರತಿಭಟನೆಯನ್ನು ನಡೆಸಲಿದ್ದೇವೆ. ಸರಕಾರ ನಮ್ಮ ಆಗ್ರಹಗಳನ್ನು ಈಡೇರಿಸದೇ ಹೋದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಸಿಎಂ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್

‘ನಿಗದಿತ ಸಮಯದೊಳಗಾಗಿ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರವಣಿಗೆ ಮೂಲಕ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ.’

-ವಿಜಯಾನಂದ ಕಾಶಪ್ಪನವರ್, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ

ಗುರುವಾರ ಮಹತ್ವದ ಸಭೆ

‘ಪ್ರವರ್ಗ 2 ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಹಿನ್ನೆಲೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಗುರುವಾರ ಮಹತ್ವದ ಸಭೆ ಕರೆದಿದ್ದು. ಈ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News