ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಪ್ರಕರಣ: ಪೊಲೀಸ್ ಅಧಿಕಾರಿ ಅಮಾನತು

Update: 2021-02-24 12:31 GMT

ಚಿಕ್ಕಬಳ್ಳಾಪುರ, ಫೆ.24: ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಸ್ಫೋಟ ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ತೋರಿದ ಅತೀವ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದಾಗಿ ಅಮಾನತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಕ್ವಾರಿಯ ಮೇಲೆ ದಾಳಿ ನಡೆದ ನಂತರ ಆರೋಪಿಗಳನ್ನು ದಸ್ತಗಿರಿ ಮಾಡಲು ಪಿಎಸ್ಐ ಗೋಪಾಲ ರೆಡ್ಡಿ ಪ್ರಾಮಾಣಿಕ ಪ್ರಯತ್ನ ಮಾಡಿಲಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ನಮೂದಿಸಿಲ್ಲ. ಪ್ರಕರಣದ ತನಿಖೆ ನಡೆಸದೇ ಫೆ.21 ಮತ್ತು 22 ರಂದು ರಜೆ ಮೇಲೆ ತೆರಳಿದ್ದೀರಿ. ಅರೋಪಿಗಳನ್ನು ದಸ್ತಗಿರಿ ಮಾಡದೇ ಇದ್ದಿದ್ದರಿಂದ ಈ ಸ್ಫೋಟ ಸಂಭವಿಸಿದೆ. ಆರೋಪಿ ನಾಗರಾಜ ಸೂಚನೆ ಮೇರೆಗೆ ಅಕ್ಕಿ ಚೀಲದಲ್ಲಿ ಸ್ಫೋಟಕ ಸಾಗಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿ 6 ಜನ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವಂತೆ ಅಧೀನ ಸಿಬ್ಬಂದಿಗೂ ಸೂಚನೆ ನೀಡಿಲ್ಲ. ಆರೋಪಿಗಳನ್ನು ಸೂಕ್ತ ಸಂದರ್ಭದಲ್ಲಿ ದಸ್ತಗಿರಿ ಮಾಡಿದ್ದರೆ ಈ ಸ್ಫೋಟ ಸಂಭವಿಸುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ತಮ್ಮನ್ನು  ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News