ಸಂಕಷ್ಟದಲ್ಲಿ ಮೀನುಗಾರಿಕೆ: ವಿವಿಧ ಬೇಡಿಕೆ ಈಡೇರಿಕೆಗೆ ಸರಕಾರಕ್ಕೆ ಮೋಗವೀರ ಸಂಘ ಒತ್ತಾಯ

Update: 2021-02-24 12:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ. 24: ಭೀಕರ ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರಿಕೆ ಇಳಿಮುಖವಾಗಿದ್ದು, ಬ್ಯಾಂಕಿನ ಸಾಲ, ಬಡ್ಡಿ ಮನ್ನಾ, ಡೀಸೆಲ್ ಮೇಲೆ ಹಾಕಿರುವ ರಸ್ತೆ ತೆರಿಗೆ ವಿನಾಯಿತಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಕರ್ನಾಟಕದ ಕರಾವಳಿಯಲ್ಲಿ ಸುಮಾರು 4750ಕ್ಕೂ ಹೆಚ್ಚು ಯಾಂತ್ರಿಕ ದೋಣಿಗಳು, ಸುಮಾರು 7500ಕ್ಕೂ ಹೆಚ್ಚು ನಾಡದೋಣಿಗಳು, 10,500 ಹೆಚ್ಚು ಔಟ್ ಬೋರ್ಡ್ ಯಾಂತ್ರಿಕ ಬೋಟ್‍ಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಕಳೆದ 5 ವರ್ಷಗಳಿಂದ ಪದೇ ಪದೇ ಚಂಡ ಮಾರುತ ಹಾಗೂ ಭೀಕರ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆ ಇಳಿಮುಖವಾಗಿ, ಮೀನುಗಾರರು ಸಂಕಷ್ಟಕ್ಕೆ ಸಿಲುಕಿ, ಪ್ರಸ್ತುತ ಶೇ.90ರಷ್ಟು ಮೀನುಗಾರಿಕೆ ಸ್ಥಗಿತಗೊಂಡಿದೆ.

ರಾಜ್ಯ ಸರಕಾರ ನೀಡುತ್ತಿರುವ ತೆರಿಗೆ ರಿಯಾಯಿತಿ ಡೀಸೆಲ್ ಪೂರೈಕೆ ಪದ್ಧತಿಯನ್ನು ಬದಲಾಯಿಸಿ ಡೆಲವರಿ ಪಾಯಿಂಟ್‍ನಲ್ಲಿ ತೆರಿಗೆ ರಿಯಾಯಿತಿ ಹಾಗೂ ವಾರ್ಷಿಕ ಕೋಟಾದಡಿಯಲ್ಲಿ ಡೀಸೆಲ್ ನೀಡಬೇಕು. ಮೀನುಗಾರಿಕೆ ಮಾಡಲು ತೆರಿಗೆ ರಹಿತ ಸೀಮೆ ಎಣ್ಣೆ ನೀಡುವುದು, ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡುವುದು, ಪ್ರತ್ಯೇಕ ಮೀನುಗಾರಿಕೆ, ಕೈಗಾರಿಕಾ ವಲಯ ರಚನೆ ಮಾಡುವುದು, ಬಂದರು ಅಭಿವೃದ್ಧಿ ಪಡಿಸುವುದು, ಮುಂಬರುವ ಬಜೆಟ್‍ನಲ್ಲಿ 10 ಸಾವಿರ ಕೋಟಿ ಪ್ಯಾಕೇಜ್ ಅನ್ನು ಕರ್ನಾಟಕ ರಾಜ್ಯ ಸಮಸ್ತ ಕರಾವಳಿ ಹಾಗೂ ಒಳನಾಡು ಮೀನುಗಾರಿಕೆ ಕಾಯ್ದಿರಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸಂಘದ ಅಧ್ಯಕ್ಷ ಜಯ. ಸಿ ಕೋಟ್ಯಾನ್ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News