ನ್ಯಾಯಾಲಯದ ಆದೇಶ ಪಾಲಿಸದ ರಿಲಯನ್ಸ್ ವಿಮಾ ಕಚೇರಿ ಜಪ್ತಿ

Update: 2021-02-24 13:06 GMT

ಹುಬ್ಬಳ್ಳಿ, ಫೆ.24: ಅಪಘಾತ ಪರಿಹಾರ ಮೊತ್ತವನ್ನು ನೀಡದ ಹುಬ್ಬಳ್ಳಿಯ ರಿಲಯನ್ಸ್ ವಿಮಾ ಕಂಪೆನಿ ಕಚೇರಿಯನ್ನು ಹುಬ್ಬಳ್ಳಿ 2ನೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಬುಧವಾರ ದೂರುದಾರರು ಮತ್ತು ವಕೀಲರು ಜಪ್ತಿ ಮಾಡಿದರು.   

ಹುಬ್ಬಳ್ಳಿಯ ದೇಸಾಯಿ ಕ್ರಾಸ್ ಬಳಿ ಇರುವ ರಿಲಯನ್ಸ್ ಕಂಪೆನಿ ಜೊತೆ ಮಾಡಿಕೊಂಡ ವಿಮೆ ಒಪ್ಪಂದದಂತೆ ನ್ಯಾಯಾಲಯ ದೂರುದಾರರಿಗೆ 11,13,600 ರೂ. ನೀಡಬೇಕು ಮತ್ತು ಘಟನೆ ನಡೆದ ದಿನದಿಂದ ಆದೇಶದ ದಿನದ ತನಕ ಶೇ.9ರಷ್ಟು ಬಡ್ಡಿ ಹಣ ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ, ಕಂಪೆನಿ ಆದೇಶ ಪಾಲನೆ ಮಾಡಿರಲಿಲ್ಲ.

ಘಟನೆ ಏನು ?: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಲಕ್ಷ್ಮಣ ಬಸಪ್ಪ ಹಳ್ಳಿಕೇರಿ ಎಂಬವರಿಗೆ 2016ರಲ್ಲಿ ಲಾರಿ ಢಿಕ್ಕಿಯಾಗಿತ್ತು. ನಾಲ್ಕು ತಿಂಗಳು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ರಿಲಯನ್ಸ್ ಕಂಪೆನಿ ಜೊತೆ ಮಾಡಿಕೊಂಡ ಒಪ್ಪಂದದಂತೆ ವಿಮೆ ಹಣವನ್ನು ಕೊಡಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಪರಿಹಾರ ಹಾಗೂ ಶೇ.9ರಷ್ಟು ಬಡ್ಡಿ ನೀಡಬೇಕು ಎಂದು ಆದೇಶ ನೀಡಿತ್ತು.

ಆದರೆ, ಕಂಪೆನಿ ವಿಮೆ ಹಣ ನೀಡದ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಕಚೇರಿಯನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಬುಧವಾರ ಕಚೇರಿ ಜಪ್ತಿ ಮಾಡುವ ಪ್ರಕ್ರಿಯೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News