ಚಿಕ್ಕಮಗಳೂರು: ಕೊರೋನ ಭೀತಿ ಮಧ್ಯೆ 'ಮಂಗನ ಕಾಯಿಲೆ' ಆತಂಕ

Update: 2021-02-24 17:37 GMT

ಚಿಕ್ಕಮಗಳೂರು, ಫೆ.24: ಕಾಫಿನಾಡಿನಲ್ಲಿ ಸದ್ಯ ಕೊರೋನ ಸೋಂಕಿನ ಪ್ರಕರಣಗಳು ಇಳಿಮುಖವಾಗಿದ್ದು, ಸಾರ್ವಜನಿಕರಲ್ಲಿ ಕೊರೋನ ಸೋಂಕಿನ ಭೀತಿ ದೂರವಾಗುತ್ತಿದೆ. ಆದರೆ ಕೊರೋನ ಸೋಂಕಿನ ಆತಂಕ ದೂರವಾಗುತ್ತಿದ್ದಂತೆ ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ 2018-19ನೇ ಸಾಲಿನಲ್ಲಿ ಉಲ್ಬಣ ಗೊಂಡಿದ್ದ ಮಂಗನ ಕಾಯಿಲೆ(ಕೆಎಫ್‍ಡಿ) ಮತ್ತೆ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಮತ್ತೆ ಆತಂಕ ಮನೆ ಮಾಡುವಂತಾಗಿದೆ.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೆಮ್ಮನೆ ಗ್ರಾಮದಲ್ಲಿ ಮಂಗನ ಕಾಯಿಲೆಯ 1 ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಕಾಯಿಲೆ ಹರಡದಂತೆ ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 2018-19ನೇ ಸಾಲಿನಲ್ಲಿ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಹಾಗೂ ತರೀಕೆರೆ ಭಾಗದಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿತ್ತು. ಆರೋಗ್ಯ ಇಲಾಖೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ವರ್ಷದ ಪ್ರಕರಣ ಬೆಳಕಿಗೆ ಬಂದಿದ್ದು, ಓರ್ವ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ ಎಂದರು.

ಮಂಗನ ಕಾಯಿಲೆಗೆ ತುತ್ತಾಗಿರುವ ಬೆಮ್ಮನೆ ಗ್ರಾಮದ ವ್ಯಕ್ತಿ ಜ.20ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಅಡಿಕೆ ತೋಟದಲ್ಲಿ ನಡೆದ ಅಡಿಕೆ ಯಂತ್ರೋಪಕರಣ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಆ ವ್ಯಕ್ತಿಗೆ ಜ.26ರಂದು ಜ್ವರ, ಶೀತ, ವಾಂತಿ ಕಾಣಿಸಿಕೊಂಡಿತ್ತು. ನಂತರ ಕೊಪ್ಪ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ಫೆ.11ರಿಂದ 14ರವರೆಗೆ ತೀರ್ಥಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.15ರಂದು ಶಿವಮೊಗ್ಗಕ್ಕೆ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದು, ಮಾದರಿಯಲ್ಲಿ ಮಂಗನ ಕಾಯಿಲೆ ವೈರಾಣು ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಗೆ ಸದ್ಯ ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಮಂಗನ ಕಾಯಿಲೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುತ್ತಿನಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಅನುಷ್ಠಾನಾಧಿಕಾರಿ ಡಾ.ಭರತ್‍ಕುಮಾರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

ಕೊರೋನ ಸೋಂಕಿಗೆ ಈಗಾಗಲೇ ರಾಜ್ಯಾದ್ಯಂತ ಲಸಿಕೆ ವಿತರಣೆ ಆರಂಭಗೊಂಡಿದೆ. ಆರಂಭದಲ್ಲಿ ಕೊರೋನ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ವಿತರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 5ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಹಂತದ ಲಸಿಕೆ ವಿತರಣೆ ಕಾರ್ಯದಲ್ಲಿ 10,609 ಆರೋಗ್ಯ ಇಲಾಖೆ ನೌಕರರು ನೋಂದಣಿಯಾಗಿದ್ದು, 7,408 ನೌಕರರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಶೇ.70ರಷ್ಟು ಮೊದಲ ಹಂತದ ಲಸಿಕೆ ನೀಡಲಾಗಿದೆ. ವಿವಿಧ ಕಾರಣಗಳಿಂದ ಬಿಟ್ಟು ಹೋಗಿದ್ದ 2,859 ನೌಕರರಿಗೂ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎರಡನೇ ಹಂತದ ಲಸಿಕೆ ವಿತರಣೆ ಕಾರ್ಯದಡಿಯಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಲಸಿಕೆ ನೀಡಲಾಗುತ್ತಿದ್ದು, 6,374 ಜನ ನೌಕರರು ನೋಂದಣಿಯಾಗಿದ್ದಾರೆ. ಈ ಪೈಕಿ 4,204 ಜನರಿಗೆ ಲಸಿಕೆ ನೀಡಿದ್ದು, ಶೇ.66ರಷ್ಟು ನೌಕರರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮೂರನೇ ಹಂತದ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯ ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಸಾರ್ವಜನಿಕರು ಲಸಿಕೆ ಪಡೆಯಲು ನೋಂದಣಿ ಮಾಡಬೇಕಿದ್ದು, ಇದಕ್ಕಾಗಿ ಸರಕಾರ ಪ್ರತ್ಯೇಕ ಆಪ್ ಬಿಡುಗಡೆ ಮಾಡಲಿದೆ. ಗರ್ಭಿಣಿಯರು, ಬಾಣಂತಿಯರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವರಿಗೆ ಲಸಿಕೆ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 218 ಅಪೌಷ್ಠಿಕತೆಯಿಂದ ಬಳಲುತ್ತಿರುವ ಪ್ರಕರಣಗಳಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅಪೌಷ್ಠಿಕತೆಗೆ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ 1 ದಿನಕ್ಕೆ 269ರೂ. ನಂತೆ 14 ದಿನಗಳ ಹಣವನ್ನು ಆರೋಗ್ಯ ಇಲಾಖೆಯಿಂದ ನೀಡಲಾಗುವುದು. ಅಪೌಷ್ಠಿಕತೆಯಿಂದ ಬಳಲುತ್ತಿರುವರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ನ್ಯೂಟ್ರಿಷಿಯನ್ ರಿಹ್ಯಾಬಿಟೇಷನ್ ಸೆಂಟರ್ ತೆರೆಯಲಾಗಿದೆ. ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಚಿಕ್ಕಮಗಳೂರು ಮಕ್ಕಳ ಆಸ್ಪತ್ರೆಯಲ್ಲಿ 10 ಹಾಸಿಗೆ ಕಾಯ್ದಿರಿಸಲಾಗಿದೆ. ಕಡೂರಿನಲ್ಲಿ 5, ತರೀಕೆರೆಯಲ್ಲಿ 5, ಮೂಡಿಗೆರೆ 5, ಹಾಗೂ ಕೊಪ್ಪ ಆಸ್ಪತ್ರೆಯಲ್ಲಿ 5 ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದರು.

ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಡೆಂಗ್, ಮಲೇರಿಯಾ ಕಾಯಿಲೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಜಂಟಿಯಾಗಿ ಲಾರ್ವ ಸರ್ವೇ ಕಾರ್ಯವನ್ನು ನಡೆಸಲಾಗುತ್ತಿದೆ. ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News