ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸಲು ವಿಶೇಷ ಅನುದಾನ ಒದಗಿಸಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2021-02-26 16:28 GMT

ಬೆಂಗಳೂರು, ಫೆ.26: ಕೋವಿಡ್-19ರ ಸಂಕಷ್ಟದಿಂದ ತೀವ್ರ ಬಿಕ್ಕಟ್ಟಿಗೆ ಒಳಗಾಗಿರುವ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮರಳಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಮುಂಬರುವ ಆಯವ್ಯಯದಲ್ಲಿ ಶಿಕ್ಷಣ ಇಲಾಖೆಗೆ ವಿಶೇಷ ಅನುದಾನಗಳನ್ನು ಒದಗಿಸಬೇಕೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕೋವಿಡ್ ಮುಂಜಾಗ್ರತೆಯಿಂದಾಗಿ ಶಾಲೆಗಳನ್ನು ಸುಮಾರು ಹತ್ತು ತಿಂಗಳಿಗೂ ಹೆಚ್ಚು ಕಾಲ ಮುಚ್ಚಲಾಗಿತ್ತು. ಹೀಗಾಗಿ 2020-21ನೇ ಶೈಕ್ಷಣಿಕ ವರ್ಷದಲ್ಲಿ ಕಲಿಯುತ್ತಿದ್ದ ಸಾವಿರಾರು ಮಕ್ಕಳು ಶಾಲೆ ತೊರೆದು ಬಾಲ ಕಾರ್ಮಿಕ, ಜೀತ ಕಾರ್ಮಿಕ, ಬಾಲ್ಯ ವಿವಾಹ, ಇತ್ಯಾದಿ ಸಾಮಾಜಿಕ ಅನಿಷ್ಟಗಳಿಗೆ ಒಳಗಾಗಿರುವ ಸಂಭವನೀಯತೆ ಹೆಚ್ಚಿವೆ.  ಆ ಮಕ್ಕಳನ್ನು ವಿಶೇಷ ಉತ್ತೇಜಕಗಳ ಮೂಲಕ ಪುನಃ ಶಾಲಾ ಮುಖ್ಯ ವಾಹಿನಿಗೆ ತರಬೇಕಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಮಕ್ಕಳ ನಡೆ ಶಾಲೆಯ ಕಡೆ ದಾಖಲಾತಿ ಆಂದೋಲನವನ್ನು ರಾಜ್ಯಾದ್ಯಂತ ಪ್ರಾರಂಭಿಸಲು ಆರ್ಥಿಕ ಸೌಲಭ್ಯ ಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಅವಕಾಶ ವಂಚಿತ ಸಮುದಾಯದ ಮಕ್ಕಳ ವಿಶೇಷವಾಗಿ ಹೆಣ್ಣು ಮಕ್ಕಳ ಕಲಿಕೆಯನ್ನು ಪುನಃ ಮೂಲಸ್ಥಿತಿಗೆ ತಂದು ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸಲು ಅಗತ್ಯವಾದ  ಸೇತುಬಂಧ ಕಾರ್ಯಕ್ರಮ, ಪೂರಕ ಕಲಿಕಾ ಚಟುವಟಿಕೆ, ಸಮುದಾಯ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ಎಪ್ರಿಲ್, ಮೇ ಹಾಗು ಜೂನ್ ತಿಂಗಳಿನಲ್ಲಿ ಮರವಿನಿಂದ ಮತ್ತೆ ಮನನ ಕಲಿಕಾ ಕಾರ್ಯಕ್ರಮವನ್ನು  ಸಾಮೂಹಿಕವಾಗಿ ಹಮ್ಮಿಕೊಳ್ಳಲು ಮತ್ತು  ಮಕ್ಕಳಿಗೆ ಅಗತ್ಯವಾದ ಪೂರಕ ಕಲಿಕಾ ಸಾಮಗ್ರಿ, ಕಾರ್ಯ ಪುಸ್ತಕಗಳನ್ನು ಒದಗಿಸಲು ವಿಶೇಷ ಅನುದಾನ ಒದಗಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಆಶಯದಂತೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸಲು ಅಗತ್ಯ ಸೌಕರ್ಯ ಮತ್ತು ನರ್ಸರಿ ಶಿಕ್ಷಕರ ನೇಮಕಾತಿಗೆ ವಿಶೇಷ ಅನುದಾನ ಒದಗಿಸುವುದು ರಾಜ್ಯದಲ್ಲಿ ಖಾಲಿ ಇರುವ ಸುಮಾರು 30ಸಾವಿರ ಶಿಕ್ಷಕರಹುದ್ದೆಗಳನ್ನು ಭರ್ತಿಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಆಶಯದಂತೆ ಬುನಾದಿ ಕಲಿಕೆಯನ್ನು ಗಟ್ಟಿಗೊಳಿಸಲು ಶಿಕ್ಷಕರ ನೇಮಕಾತಿಗೆ ಅಗತ್ಯ ಅನುದಾನ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಆಶಯದಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 12ನೇ ತರಗತಿಯವರೆಗೆ ವಿಸ್ತರಿಸಿ ಬಾಲ ಕಾರ್ಮಿಕ ಪದ್ಧತಿಯನ್ನು 18 ವರ್ಷದವರೆಗೆ ನಿಷೇಧಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News