ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಗಿಗೆ ಕತ್ತರಿ

Update: 2021-02-27 10:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಡಿಜಿಟಲ್ ಮಾಧ್ಯಮಗಳಿಗೆ ಸರಕಾರ ಹೊಸ ನಿಯಮಾವಳಿಗಳನ್ನು ಪ್ರಕಟಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಒಳಿತು ಕೆಡುಕುಗಳು ಎರಡೂ ಬಹುಕಾಲದಿಂದ ಚರ್ಚೆಯಲ್ಲಿವೆ. ಇಲ್ಲಿ ಒಳಿತುಗಳಿಗಿಂತ ಹಲವು ಪಟ್ಟು ಹೆಚ್ಚು ಕೆಡುಕುಗಳಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಾಂಗೀಯವಾದ, ಅಶ್ಲೀಲತೆ, ಮಾನಹಾನಿ, ದೇಶವಿರೋಧಿ ಚಟುವಟಿಕೆಗಳು, ಆಂತರಿಕ ಭದ್ರತೆಯ ಮೇಲೆ ದಾಳಿ, ಸೌಹಾರ್ದದ ಮೇಲೆ ದಾಳಿ, ಗಲಭೆಗಳಿಗೆ ಪೂರಕವಾದ ವದಂತಿಗಳ ಹರಡುವಿಕೆ....ಹೀಗೆ ಕೆಡುಕುಗಳ ಪಟ್ಟಿ ಸಾಲು ಸಾಲಾಗಿ ಬಿಚ್ಚಿಕೊಳ್ಳುತ್ತವೆ. ಈ ದೇಶದಲ್ಲಿ ನಡೆದಿರುವ ಹೆಚ್ಚಿನ ಕೋಮುಗಲಭೆಗಳು ನಡೆದಿರುವುದು ವದಂತಿಗಳನ್ನು ನಂಬಿ. ಡಿಜಿಟಲ್ ಮಾಧ್ಯಮಗಳು ಇನ್ನೂ ಪರಿಣಾಮಕಾರಿಯಾಗಿ ಅಸ್ತಿತ್ವದಲ್ಲಿಲ್ಲದ ಕಾಲದಲ್ಲಿ, ಗುಜರಾತ್ ಗಲಭೆಗಳನ್ನು ಹುಟ್ಟಿಸಿ ಹಾಕಿದ್ದು ಮುದ್ರಣ ಮಾಧ್ಯಮ. ಮಂಗಳೂರಿನ ಸುರತ್ಕಲ್ ಗಲಭೆಗಳಿಗೂ ಕಾರಣ, ಮುದ್ರಣ ಮಾಧ್ಯಮಗಳು ಹರಡಿದ ಸುಳ್ಳು ಸುದ್ದಿಗಳು. ಇದರಿಂದಾಗಿ ಸಮಾಜಕ್ಕಾದ ಗಾಯ ಇನ್ನೂ ಒಣಗಿಲ್ಲ. ಇಂತಹ ಸಂದರ್ಭದಲ್ಲಿ, ಯಾರು ಎಲ್ಲಿ ಬೇಕಾದರೂ ಕುಳಿತು ಡಿಜಿಟಲ್ ಮಾಧ್ಯಮಗಳನ್ನು ದುರ್ಬಳಕೆ ಮಾಡುವ ಅವಕಾಶವನ್ನು ದುಷ್ಕರ್ಮಿಗಳು ಸರ್ವ ರೀತಿಯಲ್ಲಿ ಬಳಸುವ ಸಾಧ್ಯತೆಗಳಿವೆ. ಆದುದರಿಂದ, ಇದಕ್ಕೆ ಒಂದು ಮಾರ್ಗಸೂಚಿಯ ಅಗತ್ಯವಿದೆ ಎನ್ನುವುದು ನಿಜ. ಆದರೆ, ಡಿಜಿಟಲ್ ಮಾಧ್ಯಮಗಳ ದುರುಪಯೋಗಗಳ ಮೂಲಕವೇ ಅಧಿಕಾರಕ್ಕೆ ಬಂದ ಸರಕಾರವೊಂದು, ಇದರ ನಿಯಂತ್ರಣಕ್ಕೆ ಹವಣಿಸುತ್ತದೆ ಎನ್ನುವಾಗ ಅನುಮಾನಗಳು, ಆತಂಕಗಳು ಹುಟ್ಟುವುದು ಸಹಜ. ಆದುದರಿಂದಲೇ, ಸರಕಾರದ ನಿಯಮಾವಳಿಯ ಕುರಿತಂತೆ ಹಲವು ಹಿರಿಯ ಪತ್ರಕರ್ತರು, ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ.

ಟಿವಿ ಮತ್ತು ಮುದ್ರಣ ಮಾಧ್ಯಮಗಳನ್ನು ಸಾಮೂಹಿಕವಾಗಿ ಕೊಂಡುಕೊಂಡು ತಮ್ಮ ಮೂಗಿನ ನೇರಕ್ಕೆ ಪ್ರಭುತ್ವ ಆಡಳಿತ ನಡೆಸುತ್ತಿರುವಾಗ ಹುಟ್ಟಿದ ಪರ್ಯಾಯ ಮಾಧ್ಯಮ ಸಾಮಾಜಿಕ ಮಾಧ್ಯಮವಾಗಿದೆ. ಒಂದು ಕಾಲದಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮಗಳು ಹೇಳಿರುವುದೇ ಅಂತಿಮವಾಗಿ ಬಿಡುತ್ತಿತ್ತು. ಇನ್ನೊಂದು ಆಯಾಮವನ್ನು ತೆರೆದಿಡಲು ಜನರಿಗೆ ಪರ್ಯಾಯ ಮಾಧ್ಯಮಗಳೇ ಇರಲಿಲ್ಲ. ದರ ಸಮರ, ಪೈಪೋಟಿಗಳಿಂದಾಗಿ ಟಿವಿ ಮತ್ತು ಮುದ್ರಣ ಮಾಧ್ಯಮಗಳು ತೀವ್ರ ನಷ್ಟಕ್ಕೊಳಗಾಗುತ್ತಾ ಬಂದಂತೆ ಅದು ಉದ್ಯಮಿಗಳನ್ನು, ರಾಜಕೀಯ ಪಕ್ಷಗಳನ್ನು ಹೆಚ್ಚು ನೆಚ್ಚಿಕೊಳ್ಳಬೇಕಾದುದು ಅನಿವಾರ್ಯವಾಯಿತು. 20 ರೂಪಾಯಿಗೆ ಮುದ್ರಿಸುತ್ತಿದ್ದ ಪತ್ರಿಕೆಯನ್ನು 4 ರೂಪಾಯಿಗೆ ಮಾರಬೇಕಾದರೆ, ಉಳಿದ ಹಣವನ್ನು ತುಂಬಿಕೊಳ್ಳುವ ದಾರಿಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯಕ್ಕೆ ಪತ್ರಿಕೆಗಳು ಸಿಲುಕಿಕೊಂಡವು. ಅಲ್ಲಿಂದ ಪತ್ರಿಕೆಗಳು ಓದುಗರ ಪರವಾಗಿರದೆ, ಸರಕಾರದ, ಬೃಹತ್ ಉದ್ಯಮಿಗಳ ಪರವಾಗಿ ಮಾತನಾಡಲು ಆರಂಭಿದವು. ಸರಕಾರದ ಜನವಿರೋಧಿ ಕಾನೂನುಗಳನ್ನೂ ಮಾಧ್ಯಮಗಳು ಹಾಡಿ ಹೊಗಳಲು ಆರಂಭಿಸಿದವು. ಇಂತಹ ಮಾಧ್ಯಮಗಳನ್ನು ಬಳಸಿಕೊಂಡೇ ನರೇಂದ್ರ ಮೋದಿಯ ಗುಜರಾತ್‌ನ್ನು ‘ಮಾದರಿ ರಾಜ್ಯ’ವಾಗಿ ಬಿಂಬಿಸಲಾಯಿತು. ಮೋದಿ ವಿಶ್ವದ ನಾಯಕನಾಗಿ ಕಂಗೊಳಿಸಿರುವುದರ ಹಿಂದೆಯೂ ಈ ಮಾಧ್ಯಮಗಳ ಪಾತ್ರಗಳಿವೆ. ಇಂತಹ ಸಂದರ್ಭದಲ್ಲಿ ಮುದ್ರಣ ಮತ್ತು ಟಿವಿ ಮಾಧ್ಯಮಗಳಿಗೆ ಪರ್ಯಾಯ ಪಾತ್ರವನ್ನು ಸಾಮಾಜಿಕ ಜಾಲತಾಣಗಳು ನಿರ್ವಹಿಸತೊಡಗಿದವು.

ಮುದ್ರಣ ಮಾಧ್ಯಮಗಳಲ್ಲಿ ಬಂದದ್ದೇ ಅಂತಿಮವಲ್ಲ ಎನ್ನುವುದನ್ನು ಸಾಮಾಜಿಕ ಜಾಲತಾಣಗಳು ಜನರಿಗೆ ವಿವರಿಸತೊಡಗಿದವು. ಅದರ ಇನ್ನೊಂದು ಮುಖವನ್ನ್ನು ಇವುಗಳು ತೆರೆದಿಟ್ಟವು. ಇದರಿಂದ, ಗುಲಾಮಗಿರಿ ಮಾಡುತ್ತಿದ್ದ ಮುದ್ರಣ ಮತ್ತು ಟಿವಿ ಮಾಧ್ಯಮಗಳು ತೀವ್ರ ಮುಜುಗರಕ್ಕೊಳಗಾದವು. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳನ್ನೂ ಪ್ರಭುತ್ವ ಆರಂಭದಲ್ಲಿ ತನಗೆ ಪೂರಕವಾಗಿ, ಪರಿಣಾಮಕಾರಿಯಾಗಿ ಬಳಸಲಾರಂಭಿಸಿತಾದರೂ, ಹಿರಿಯ ತನಿಖಾವರದಿಗಾರರು, ತಜ್ಞರು, ವಿದ್ಯಾರ್ಥಿಗಳು, ಚಳವಳಿಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗುತ್ತಿದ್ದಂತೆಯೇ ಪ್ರಭುತ್ವ ಇಕ್ಕಟ್ಟಿಗೆ ಸಿಲುಕಿಕೊಂಡಿತು. ನೋಟು ನಿಷೇಧದ ವೈಫಲ್ಯ, ಜಿಎಸ್‌ಟಿಯಿಂದ ಆಗಿರುವ ಅನಾಹುತಗಳು, ಕೊರೋನದಲ್ಲಿ ಸರಕಾರದ ವೈಫಲ್ಯ, ಲಾಕ್‌ಡೌನ್‌ನ ದುರಂತಗಳು, ಸಿಎಎಯಿಂದ ದೇಶ ಎದುರಿಸುವ ಬಿಕ್ಕಟ್ಟುಗಳು, ನೂತನ ಕೃಷಿ ಕಾನೂನಿಂದ ಆಗಬಹುದಾದ ನಷ್ಟ, ಕಷ್ಟಗಳು ಇವೆಲ್ಲವನ್ನು ಜನರ ಬಳಿಗೆ ತಲುಪಿಸಿರುವುದು ಟಿವಿ ಅಥವಾ ಮುದ್ರಣ ಮಾಧ್ಯಮಗಳಲ್ಲ. ಬದಲಿಗೆ ಡಿಜಿಟಲ್ ಮಾಧ್ಯಮಗಳು. ಈ ಕಾರಣದಿಂದಲೇ ಸರಕಾರಕ್ಕೆ ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣವೊಂದರ ಅಗತ್ಯ ಬಿದ್ದಿದೆ.

ಯಾವ ಪಕ್ಷದ ಸರಕಾರ ಇಂದು ಸಾಮಾಜಿಕ ಮಾಧ್ಯಮಗಳ ಕುರಿತಂತೆ ಕಾಳಜಿ ವ್ಯಕ್ತಪಡಿಸುತ್ತವೆಯೋ ಅದು ತನ್ನದೇ ಆದ ಐಟಿ ಸೆಲ್‌ಗಳನ್ನು ಹೊಂದಿದೆ. ಮೋದಿ ಸರಕಾರದ ವೈಫಲ್ಯಗಳನ್ನು ಸಮರ್ಥಿಸುವುದಕ್ಕಾಗಿಯೇ ಲಕ್ಷಾಂತರ ನಕಲಿ ಖಾತೆಗಳನ್ನೂ ಈ ಐಟಿ ಸೆಲ್ ಹೊಂದಿದೆ ಎನ್ನುವ ಆರೋಪ ಹಿಂದಿನಿಂದಲೂ ಇದೆ. ಮೊತ್ತ ಮೊದಲು, ಈ ಐಟಿ ಸೆಲ್‌ಗಳ ವಿರುದ್ಧ ಕ್ರಮ ತೆಗೆದುಕೊಂಡ ಆನಂತರವೇ ಅದು ದೇಶಕ್ಕೆ ನಿಯಮಗಳನ್ನು ಹೇರಬೇಕಾಗುತ್ತದೆ. ಕೋಮು ಪ್ರಚೋದಕ ಸುಳ್ಳುಗಳನ್ನು ಬಿಜೆಪಿಯ ನಾಯಕರ ನೇತೃತ್ವದಲ್ಲೇ ಹರಡುತ್ತಿರುವಾಗ, ಹೊಸ ನಿಯಮಾವಳಿಗಳು ನಿಯಮಬಾಹಿರ ಸ್ಟೇಟಸ್‌ಗಳನ್ನು ತಡೆಯುತ್ತವೆ ಎಂದು ನಿರೀಕ್ಷಿಸುವುದು ಸಾಧ್ಯವೆ? ಅಂದರೆ ಈ ನಿಯಮಾವಳಿಗಳ ಉದ್ದೇಶ ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ಸುಳ್ಳುಗಳನ್ನು ಬಯಲು ಮಾಡುತ್ತಿರುವ ಪತ್ರಕರ್ತರು, ತಜ್ಞರು, ತನಿಖಾ ವರದಿಗಳು, ಮಾಹಿತಿ ಹಕ್ಕು ಹೋರಾಟಗಾರರ ಬಾಯಿ ಮುಚ್ಚಿಸುವುದು ಇದರ ಗುರಿಯಾಗಿದೆ.

ಈ ನಿಯಮಗಳ ಮೊದಲ ಬಲಿಪಶುಗಳೇ ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಸರಕಾರಕ್ಕೆ ಮುಜುಗರ ತರುವ ಎಲ್ಲ ವರದಿಗಳು ಮುಂದಿನ ದಿನಗಳಲ್ಲಿ ದೇಶದ ಆಂತರಿಕ ಭದ್ರತೆಗೆ ಅಪಾಯತರುವ ವರದಿಗಳಾಗಿ ಗುರುತಿಸಲ್ಪಟ್ಟು ಅದರ ಮೇಲೆ ನಿಯಂತ್ರಣ ಹೇರುವ ಸಾಧ್ಯತೆಗಳನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಇತ್ತೀಚೆಗಿನ ‘ಟೂಲ್ ಕಿಟ್’ ಪ್ರಕರಣವನ್ನೇ ತೆಗೆದುಕೊಳ್ಳೋಣ. ದಿಶಾ ರವಿ ಹಂಚಿಕೊಂಡ ಟೂಲ್‌ಕಿಟ್‌ನ್ನು ಪೊಲೀಸರು ವೈಭವೀಕರಿಸಿದರು. ಸರಕಾರ ಕೃಪಾಪೋಷಿತ ಟಿವಿ ಮತ್ತು ಮುದ್ರಣ ಮಾಧ್ಯಮಗಳು ಅತ್ಯಂತ ವರ್ಣರಂಜಿತವಾಗಿ ಈ ಟೂಲ್‌ಕಿಟ್ ಬಗ್ಗೆ ವಿವರಗಳನ್ನು ಕೊರೆದವು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಹೊಣೆಗಾರಿಕೆಯನ್ನು ಮೆರೆದವು ಮತ್ತು ಸತ್ಯಾಂಶವೇನು ಎನ್ನುವುದನ್ನು ಜನರಿಗೆ ತಿಳಿಸಿಕೊಟ್ಟವು. ಮುಂದೆ ನ್ಯಾಯಾಲಯವೂ ದಿಶಾ ರವಿಯನ್ನು ಸಮರ್ಥಿಸಿತಲ್ಲದೆ, ಅಭಿವ್ಯಕ್ತಿ ಸ್ವಾತಂತ್ರದ ಕುರಿತಂತೆ ಸರಕಾರಕ್ಕೆ ಕಿವಿ ಮಾತನ್ನೂ ಹೇಳಿತು. ಆದರೆ ಸರಕಾರದ ಹೊಸ ನಿಯಮಾವಳಿಗಳು ದಿಶಾ ರವಿಯ ಪರವಾಗಿರುವ ಯಾವುದೇ ಲೇಖನ, ವರದಿಗಳನ್ನು ದೇಶ ವಿರೋಧಿ ಎಂದು ಕಿತ್ತು ಹಾಕಬಹುದು. ಅಷ್ಟೇ ಅಲ್ಲ, ಆ ಲೇಖನ ಬರೆದವನ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಆದುದರಿಂದಲೇ, ಸಾಮಾಜಿಕ ಮಾಧ್ಯಮಗಳ ಮೇಲೆ ‘ಸರ್ವಾಧಿಕಾರಿ’ ಎಂದು ವಿಶ್ವಾದ್ಯಂತ ಟೀಕೆಗೊಳಗಾಗಿರುವ ಒಂದು ಸರಕಾರ ನಿಯಮಾವಳಿಗಳನ್ನು ಹೇರಲು ಹೊರಡುತ್ತಿದೆ ಎಂದರೆ ಅದನ್ನು ನಾವು, ಅಭಿವ್ಯಕ್ತಿ ಸ್ವಾತಂತ್ರಕ್ಕೆ ಮೂಗುದಾರ ಎಂದು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಸರಕಾರ ಅಭಿವ್ಯಕ್ತಿ ಸ್ವಾತಂತ್ರದ ಮೂಗನ್ನೇ ಕತ್ತರಿಸಲು ಹೊರಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News